

Thailand: ದಕ್ಷಿಣ ಏಷ್ಯಾದ ಸುಂದರ ದೇಶ ಎಂದೇ ಕರೆಯಲ್ಪಡುವ ಥೈಲ್ಯಾಂಡ್, ವೈವಿದ್ಯಮಯ ಸಂಸ್ಕೃತಿಗೆ ಪ್ರಸಿದ್ಧವಾಗಿದ್ದು, ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ. ಇದೀಗ ಥೈಲ್ಯಾಂಡ್ ಸರ್ಕಾರವು ಶೀಘ್ರವೇ 300 ಬಹತ್ (ಅಂದರೆ ಸುಮಾರು 820 ರೂ.) ಪ್ರವಾಸೋದ್ಯಮ ತೆರಿಗೆ ವಸೂಲಿ ಮಾಡಲು ಚಿಂತಿಸಿದೆ. ನೂತನ ಸಚಿವ ಅತ್ತಕೋರ್ನ್ ಸಿರಿಲತ್ತಾಯಕೋರ್ನ್ ಈ ಹಣವನ್ನು ಪ್ರವಾಸಿಗರ ವಿಮೆ ಮತ್ತು ಪ್ರವಾಸೋದ್ಯಮದ ಮೂಲಸೌಕರ್ಯ ಸುಧಾರಣೆಗೆ ಬಳಸಲಾಗುತ್ತದೆ ಎಂಬ ಕಾರಣವನ್ನು ನೀಡಿದ್ದಾರೆ.
ಈ ಬಗ್ಗೆ ಮೊದಲ ಬಾರಿಗೆ 2020ರಲ್ಲಿಯೇ ಪ್ರಸ್ತಾಪಿಸಲಾಗಿತ್ತು ಹಾಗೂ 2023ರಲ್ಲಿ ಮಂತ್ರಿಮಂಡಲದಿಂದ ಅನುಮೋದನೆ ಕೂಡ ಪಡೆಯಲಾಗಿತ್ತು. ಆದರೆ, ಅಂದಿನಿಂದ ಅದು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಮೊದಲಿನ ಯೋಜನೆಯ ಪ್ರಕಾರ, ವಿಮಾನ ಮಾರ್ಗದಿಂದ ಬರುವವರಿಗೆ 300 ಬಹತ್ (ಕರೆನ್ಸಿ) ಹಾಗೂ ಭೂಮಾರ್ಗ ಅಥವಾ ಸಮುದ್ರ ಮಾರ್ಗದಿಂದ ಬರುವವರಿಗೆ 150 ಬಹತ್ ತೆರಿಗೆ ವಿಧಿಸುವ ಉದ್ದೇಶವನ್ನು ಹೊಂದಿತ್ತು ಎನ್ನಲಾಗಿದೆ.
ಆದರೆ, ಹಿಂದಿನ ಸಚಿವರು ಇದನ್ನು 2025ರ ಅಂತ್ಯದೊಳಗೆ ಜಾರಿಗೊಳಿಸುವುದಾಗಿ ಹೇಳಿದ್ದರು. ನಂತರ ಅದನ್ನು ಮುಂದೂಡಿದ್ದರು. ಪ್ರಸ್ತುತ, ನೂತನ ಸಚಿವರು ಈ ತೆರಿಗೆಯಿಂದ ಪ್ರವಾಸಿಗರಿಗೆ ಯಾವ ರೀತಿಯಲ್ಲಿ ಪ್ರಯೋಜನವಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಮಾಹಿತಿಯನ್ನು ತಿಳಿಸಬೇಕು ಎಂದು ಹೇಳಿರುವುದಾಗಿ ವರದಿಯಾಗಿದೆ. ಅದರೆ, ಇತ್ತೀಚಿನ ಮಾಹಿತಿಯ ಪ್ರಕಾರ, ಈ ತೆರಿಗೆ 2026ರ ಅಥವಾ ಮೂರನೇ ತ್ರೈಮಾಸಿಕದಲ್ಲಿ ಜಾರಿಯಾಗವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಭಾರತವು ಈಗ ಥೈಲ್ಯಾಂಡ್ಗೆ ಪ್ರಮುಖ ಪ್ರವಾಸಿ ಮೂಲ ರಾಷ್ಟ್ರವಾಗಿದೆ. 2024ರಲ್ಲಿ 2.1 ಲಕ್ಷಕ್ಕೂ ಹೆಚ್ಚು ಭಾರತೀಯರು ಥೈಲ್ಯಾಂಡ್ಗೆ ಪ್ರಯಾಣಿಸಿದ್ದಾರೆ. ಇದು 2023ರಲ್ಲಿ ಶೇ.30ರಷ್ಟು ಹೆಚ್ಚಾಗಿದೆ. ಹೀಗಾಗಿ ಈ ತೆರಿಗೆ ಜಾರಿಯಾದರೆ ಪ್ರಾಯಶಃ ಭಾರತೀಯ ಪ್ರವಾಸಿಗರು ಥೈಲ್ಯಾಂಡ್ ಪ್ರವಾಸ ಕೈಗೊಳ್ಳುವುದನ್ನು ಮೊಟಕುಗೊಳಿಸಬಹುದು.
ಹೆಚ್ಚುವರಿ ವೆಚ್ಚ: ಪ್ರತಿ ವ್ಯಕ್ತಿಗೆ ಸುಮಾರು 800ರಿಂದ 900 ರೂ. ಖರ್ಚು ತಗುಲಬಹುದು. ಇದು ದೊಡ್ಡ ಮೊತ್ತ ಅಲ್ಲದಿದ್ದರೂ ಬಜೆಟ್ ಪ್ರವಾಸಿಗರಿಗೆ ಕೊಂಚ ಹೊರೆ ಆಗುವ ಸಾಧ್ಯತೆಯಿದೆ.