

Rashmika Mandanna: ಕೊಡಗಿನ ಬೆಡಗಿ, ‘ಕಿರಿಕ್ ಪಾರ್ಟಿ’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಸದ್ಯ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ, ಅ.03ರಂದು ತಮ್ಮ ಬಹುದಿನಗಳ ಸ್ನೇಹಿತ ಟಾಲಿವುಡ್ ನಟ ವಿಜಯ್ ದೇವರಕೊಂಡ ಜತೆ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡರು. ಈ ಸುದ್ದಿ ತೆಲುಗು ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದ್ದಂತೆ ಇದೀಗ ಮತ್ತೊಂದು ವಿಚಾರದ ಮೂಲಕ ನಟಿ ಸುದ್ದಿಯಾಗಿದ್ದಾರೆ.
ಬಾಲಿವುಡ್, ಟಾಲಿವುಡ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ರಶ್ಮಿಕಾ, ಸದ್ಯ ಕನ್ನಡ ಚಿತ್ರರಂಗದಿಂದ ಬಹಳ ದೂರ ಉಳಿದಿದ್ದಾರೆ. ಇದಕ್ಕೆ ಕಾರಣ, ಅವರು ನೀಡಿರುವ ಒಂದಷ್ಟು ವಿವಾದಾತ್ಮಕ ಹೇಳಿಕೆಗಳು ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡದಿರುವುದು ಎಂದು ಹೇಳಲಾಗಿದೆ. ತಮ್ಮ ಮುಂದಿನ ಬಾಲಿವುಡ್ ಸಿನಿಮಾ 'ತಮ್ಮಾ' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ರಶ್ಮಿಕಾ ಮಂದಣ್ಣ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಬ್ಲಾಕ್ಬಸ್ಟರ್ 'ಕಾಂತಾರ ಚಾಪ್ಟರ್ 1' ಚಿತ್ರ ನೋಡಿದ್ರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಇದೀಗ ಪ್ರತಿಕ್ರಿಯಿಸಿದ್ದಾರೆ.
'ಟೈಮ್ ಆಫ್ ಇಂಡಿಯಾ' ವರದಿ ಪ್ರಕಾರ, "ನೋಡಿ ಚಿತ್ರ ರಿಲೀಸ್ ಆದ ಮೊದಲ 2-3 ದಿನಗಳಲ್ಲಿ ನಾನು ನೋಡಲು ಸಾಧ್ಯವಾಗಲಿಲ್ಲ. ಆದರೆ, ಇತ್ತೀಚೆಗೆ ಸಿನಿಮಾ ನೋಡಿ, ಅದರ ಬಗ್ಗೆ ಚಿತ್ರತಂಡಕ್ಕೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಅದಕ್ಕೆ ಅವರಿಂದ 'ಧನ್ಯವಾದ' ಅಂತ ಪ್ರತಿಕ್ರಿಯೆ ಕೂಡ ಬಂದಿದೆ. ಜಗತ್ತಿಗೆ ನಮ್ಮೊಳಗೆ ಏನಾಗುತ್ತಿದೆ ಅನ್ನೋದು ತಿಳಿಯೋದಿಲ್ಲ. ಮೇಲ್ನೋಟಕ್ಕೆ ಏನು ಕಾಣಿಸುತ್ತದೆಯೋ ಅದನ್ನೇ ಮಾತಾಡ್ತಾರೆ. ನಮ್ಮ ಖಾಸಗಿ ಜೀವನದ ಮೇಲೆ ಕ್ಯಾಮರಾ ಇಡಲು ಸಾಧ್ಯವಿಲ್ಲ. ಇತರರಂತೆ ಎಲ್ಲ ವಿಷಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ವ್ಯಕ್ತಿಯೂ ನಾನಲ್ಲ. ನಮ್ಮ ಜೀವನದ ಬಗ್ಗೆ ಯಾರೋ ಒಬ್ಬರು ಏನೋ ಹೇಳ್ತಾರೆ ಅನ್ನೋದು ನಮಗೆ ಮುಖ್ಯವಲ್ಲ. ನಮ್ಮ ವೃತ್ತಿಯ ಕುರಿತು ಅವರೇಳುವ ಮಾತುಗಳಿಗೆ ಸ್ಪಂದಿಸಬಹುದು. ಅದನ್ನು ಸರಿಪಡಿಸಿಕೊಳ್ಳುವ ಅಥವಾ ಅದರ ಮೇಲೆ ಕೆಲಸ ಮಾಡಬಹುದು" ಎಂದು ರಶ್ಮಿಕಾ ಹೇಳಿದ್ದಾರೆ.
ಇನ್ನು ಕನ್ನಡ ಚಿತ್ರರಂಗದಿಂದ ರಶ್ಮಿಕಾರನ್ನು ಬ್ಯಾನ್ ಮಾಡಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ನಟಿ, "ಇದೆಲ್ಲವೂ ಸುಳ್ಳು. ನನಗೆ ತಿಳಿದಿರುವ ಮಟ್ಟಿಗೆ ಹಾಗೂ ಇಲ್ಲಿಯವರೆಗೆ ನನ್ನನ್ನು ಆ ರೀತಿ ಬ್ಯಾನ್ ಏನು ಮಾಡಿಲ್ಲ" ಎಂದರು. ಈ ಮೂಲಕ ವದಂತಿ, ಟ್ರೋಲ್ಗಳನ್ನು ತಳ್ಳಿಹಾಕಿದರು,(ಏಜೆನ್ಸೀಸ್).
ಸಿನಿಮಾ ಕುರಿತಂತೆ ಮೇಲ್ನೋಟಕ್ಕೆ ಇದು ರಶ್ಮಿಕಾ ಇತ್ತೀಚೆಗೆ ಕೊಟ್ಟ ಪ್ರತಿಕ್ರಿಯೆ ಎನ್ನಲಾಗಿದ್ದೇ ಆದರೂ ಈ ಹಿಂದೆ ಕಾಂತಾರ ಸೀಕ್ವೆಲ್ ಸಮಯದಲ್ಲಿ ಮಾತನಾಡಿದ ಮಾತುಗಳು ಎಂದು ಹೇಳಲಾಗುತ್ತಿದೆ.