

ಚೀನಾದಿಂದ ರಫ್ತಾಗುವ ಟೆಸ್ಟಿಂಗ್ ಕಿಟ್, ಪಿಪಿಇ ಕಿಟ್ಗಳ ಬಗ್ಗೆ ಅನೇಕ ರಾಷ್ಟ್ರಗಳು ಕ್ಯಾತೆ ತೆಗೆದಿವೆ. ಗುಣಮಟ್ಟವಿಲ್ಲ ಎಂದೂ ಆರೋಪ ಮಾಡಿ, ವಾಪಸ್ ಕಳಿಸಿದ್ದು ಈಗಾಗಲೇ ಸುದ್ದಿಯಾಗಿದೆ.
ಆದರೆ ಸದ್ಯ ಪೂರ್ವ ಆಫ್ರಿಕಾದ ಟಾಂಜಾನಿಯಾ ದೇಶ ಒಂದು ವಿಚಿತ್ರ ಆರೋಪ ಮಾಡಿದೆ. ವಿದೇಶದಿಂದ ತರಿಸಲಾದ ಕರೊನಾ ಟೆಸ್ಟಿಂಗ್ ಕಿಟ್ ಸ್ವಲ್ಪವೂ ಸರಿಯಿಲ್ಲ. ಅದರಲ್ಲಿ ವಿಪರೀತ ದೋಷವಿದೆ ಎಂದು ಟಾಂಜಾನಿಯಾ ಅಧ್ಯಕ್ಷ ಜಾನ್ ಮಾಗುಫುಲಿ ಹೇಳಿದ್ದಾರೆ.
ಟಾಂಜಾನಿಯಾದಲ್ಲಿ ಕರೊನಾ ಸೋಂಕಿನ ಸಂಖ್ಯೆಯನ್ನು ಬಹಿರಂಗಪಡಿಸದಂತೆ ಆದೇಶ ಹೊರಡಿಸಿ ಟೀಕೆಗೆ ಒಳಗಾಗಿದ್ದ ಜಾನ್ ಅವರು ಈಗ ಮತ್ತೊಂದು ವಿಷಯವನ್ನು ಹೇಳುವ ಮೂಲಕ ವಿಚಿತ್ರ ರೀತಿಯಲ್ಲಿ ಸುದ್ದಿಯಾಗಿದ್ದಾರೆ.
ವಾಯವ್ಯ ಟಾಂಜಾನಿಯಾದ ಚಾಟೋ ಎಂಬಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಜಾನ್ ಮಾಗುಫುಲಿ ಅವರು, ಕರೊನಾ ಟೆಸ್ಟ್ ಕಿಟ್ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು. ಆದರೆ ಅವು ತಾಂತ್ರಿಕ ಸಮಸ್ಯೆ ಹೊಂದಿವೆ. ಪಪ್ಪಾಯಿ ಹಣ್ಣು, ಕುರಿ, ಮೇಕೆಗಳಿಗೂ ಕರೊನಾ ಪಾಸಿಟಿವ್ ಎಂದೇ ವರದಿ ತೋರಿಸುತ್ತಿವೆ ಎಂದು ಹೇಳಿದ್ದಾರೆ.
ನಾವಿದನ್ನು ನೋಡಿದ್ದೇವೆ. ಕುರಿ, ಮೇಕೆಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ತಪಾಸಣೆಗೆ ಕಳಿಸಲಾಗಿತ್ತು. ಅಷ್ಟೇ ಅಲ್ಲ ಪಪ್ಪಾಯ ಹಣ್ಣಿನ ರಸವನ್ನೂ ರವಾನಿಸಲಾಗಿತ್ತು. ಆದರೆ ಅದರ ಮೇಲೆ ಮನುಷ್ಯರ ಹೆಸರು ಮತ್ತು ವಯಸ್ಸನ್ನು ನಮೂದಿಸಲಾಗಿತ್ತು. ಕಿಟ್ ಪರೀಕ್ಷೆ ಮಾಡಲೆಂದೇ ಹೀಗೆ ಮಾಡಿದ್ದೆವು.
ಲ್ಯಾಬೋರೇಟರಿಯಲ್ಲಿ ಇದನ್ನು ಪರೀಕ್ಷೆ ಮಾಡುವವರಿಗೆ ಇವು ಕುರಿ, ಮೇಕೆ, ಪಪ್ಪಾಯದ್ದು, ಮನುಷ್ಯರದ್ದಲ್ಲ ಎಂದು ಗೊತ್ತಿರಲಿಲ್ಲ. ಅವರು ವಿದೇಶದಿಂದ ಬಂದ ಟೆಸ್ಟಿಂಗ್ ಕಿಟ್ಗಳ ಮೂಲಕ ಆ ಮಾದರಿಗಳನ್ನು ತಪಾಸಣೆ ಮಾಡಿ ವರದಿ ನೀಡಿದ್ದಾರೆ. ಎಲ್ಲವೂ ಕರೊನಾ ಪಾಸಿಟಿವ್ ಎಂದೇ ಬಂದಿವೆ. ನಮಗೆ ಇದು ದೊಡ್ಡ ಆಶ್ಚರ್ಯವನ್ನುಂಟುಮಾಡಿದೆ ಎಂದು ಜಾನ್ ಹೇಳಿದ್ದಾರೆ.
ಕುರಿ, ಮೇಕೆಗಳಿಗೇನೂ ಕರೊನಾ ವೈರಸ್ ತಗುಲಿಲ್ಲ. ಪಪ್ಪಾಯ ಹಣ್ಣಿಗೆ ಹೇಗೆ ಸೋಂಕು ಬರುತ್ತದೆ. ಆದರೂ ವರದಿ ಪಾಸಿಟಿವ್ ಬಂದಿದೆ ಅಂದರೆ ಇಲ್ಲೋನೋ ತಪ್ಪಾಗುತ್ತಿದೆ ಎಂದೇ ಅರ್ಥ. ಇದರ ಬಗ್ಗೆ ತನಿಖೆಯಾಗಲೇಬೇಕು ಎಂದು ಮಗುಫುಲಿ ಆದೇಶ ನೀಡಿದ್ದಾರೆ. ಅಲ್ಲದೆ, ತಮ್ಮ ದೇಶದ ಸೈನಿಕರಿಗೆ ಎಚ್ಚರಿಕೆಯಿಂದ ಇರಬೇಕು. ಆಮದಾಗುವ ಇಂಥ ಕಿಟ್ಗಳನ್ನು ಒಮ್ಮೆ ಪರಿಶೀಲನೆ ನಡೆಸಿ ಎಂದಿದ್ದಾರೆ.
ಸದ್ಯ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಆಫ್ರಿಕನ್ ದೇಶಗಳಲ್ಲಿ ಕರೊನಾ ಪ್ರಸರಣ ಕಡಿಮೆ ಇದೆ. ಟಾಂಜಾನಿಯಾದಲ್ಲಿ ಭಾನುವಾರದವರೆಗೆ 480 ಕರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಅದಾದ ಮೇಲೆ ಅಧ್ಯಕ್ಷ ಜಾನ್ ಮಾಗುಫುಲಿ ಹೆಲ್ತ್ ಬುಲೆಟಿನ್ ನೀಡುವುದನ್ನು ನಿಷೇಧಿಸಿದ್ದಾರೆ. (ಏಜೆನ್ಸೀಸ್)