ಭಾರತದ ಬಾಗಿಲಲ್ಲಿ ಟೆಸ್ಲಾ ಕಾರು.. ವಿಳಂಬ ಯಾಕೆ?: 2019ರಲ್ಲೇ ಬರಬೇಕಿದ್ದ ಇ-ವಾಹನ, ಬೆಂಗಳೂರಿನಲ್ಲಿ ಷೋ ರೋಂನ ಉದ್ದೇಶ..

Tesla
Published on

ನವದೆಹಲಿ: ಭಾರತದಲ್ಲಿ ಟೆಸ್ಲಾ ಕಂಪನಿಯ ವಿದ್ಯುತ್ ಚಾಲಿತ ಕಾರುಗಳ ಬಗ್ಗೆ ಬಹಳ ವ್ಯಾಮೋಹ. ಇದಕ್ಕೆ ಪೂರಕವಾಗಿ 2019ರಲ್ಲೇ ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಎಲಾನ್ ಮಸ್ಕ್ ಬಯಸಿದ್ದರು. ಆದರೆ, ಇದುವರೆಗೂ ಟೆಸ್ಲಾ ಕಾರುಗಳ ಭಾರತ ಪ್ರವೇಶ ಸಾಧ್ಯವಾಗಿಲ್ಲ. ಯಾಕೆ ಎಂಬ ಪ್ರಶ್ನೆ ಮೂಡಿದೆ. ಈ ವಿದ್ಯಮಾನದ ಸುತ್ತಲಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನ ಕ್ಷೇತ್ರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. ಆದರೆ, ಅಮೆರಿಕದ ಮುಂಚೂಣಿ ವಿದ್ಯುತ್ ಚಾಲಿತ ಕಾರುಗಳ ಉತ್ಪಾದಕ ಕಂಪನಿ ಟೆಸ್ಲಾಗೆ ಮಾತ್ರ ಭಾರತ ಪ್ರವೇಶ ಕಠಿಣವೆನಿಸಿದೆ. ಆದಾಗ್ಯೂ 2019ರಲ್ಲಿ ಭಾರತ ಪ್ರವೇಶ ಘೋಷಿಸಿದ ಬಳಿಕ ಇದುವರೆಗೆ ಆಗಿರುವ ಬೆಳವಣಿಗೆಗಳು ಅಲ್ಪ ತೃಪ್ತಿದಾಯಕ. ಟೆಸ್ಲಾ ಕಂಪನಿ 2021 ಜನವರಿ 8ರಂದು ಭಾರತದಲ್ಲಿ ಕಂಪನಿ ನೋಂದಣಿ ಮಾಡಿಸಿಕೊಂಡಿತು. ಬೆಂಗಳೂರಿನಲ್ಲಿ ವಾಹನ ಷೋರೂಂ ತೆರೆಯಲು ಜಾಗ ವನ್ನು ಹುಡುಕಿ ಅಂತಿಮ ಗೊಳಿಸಲು ಸಜ್ಜಾಗಿತ್ತು. ಇದಕ್ಕೆ ಪೂರಕವಾಗಿ ಟೆಸ್ಲಾ ಮಾಡೆಲ್ 3 ರಕ್ತವರ್ಣದ ಕಾರು ಕಳೆದ ಜುಲೈನಲ್ಲಿ ಬೆಂಗಳೂರಿಗೆ ಆಗಮಿಸಿತ್ತು. ನಂತರ ಪ್ರಗತಿ ಕಂಡಿಲ್ಲ.

ಸುಂಕದ ಲೆಕ್ಕಾಚಾರ: ಅಮೆರಿಕದ ಮಾರುಕಟ್ಟೆಯಲ್ಲಿ ಟೆಸ್ಲಾ ಮಾಡೆಲ್ 3 ಕಾರಿನ ಮೂಲ ದರ 39,990 ಡಾಲರ್ (ಅಂದಾಜು 30 ಲಕ್ಷ ರೂ.) ಈ ಕಾರನ್ನು ಭಾರತಕ್ಕೆ ಆಮದು ಮಾಡಿಕೊಂಡರೆ ಶೇ. 204 ಸೀಮಾ ಸುಂಕವೂ ಸೇರಿ ಇತರೆ ವೆಚ್ಚಗಳನ್ನು ಪಾವತಿಸಬೇಕು. ಈ ಕಾರನ್ನು ಕಂಪ್ಲೀಟ್ಲಿ ಬಿಲ್ಟ್ ಯುನಿಟ್ ವಿದ್ಯುತ್ ಚಾಲಿತ ಕಾರು ಎಂದು ಪರಿಗಣಿಸುವ ಕಾರಣ ಶೇ.100 ಸೀಮಾ ಸುಂಕ. ಅಂದರೆ ಭಾರತಕ್ಕೆ ತಲುಪುವಾಗ ಇದರ ದರ 70 ಲಕ್ಷ ರೂ.!.

ಭಾರತದಲ್ಲಿ ಟೆಸ್ಲಾ ಕಾರು ಮಾಲೀಕರು

  • ಮುಕೇಶ್ ಅಂಬಾನಿ (ಆರ್​ಐಎಲ್)
  • ಪ್ರಶಾಂತ್ ರುಯಿಯ (ಎಸ್ಸಾರ್ ಗ್ರೂಪ್)
  • ಜಾ ಬಾತ್ರಾ (ಬಾಲಿವುಡ್ ನಟಿ)
  • ರಿತೇಶ್ ದೇಶಮುಖ್ (ನಟ)

ಟೆಸ್ಲಾ ಕಂಪನಿ ಬಯಸುವುದೇನು?: ಭಾರತದಲ್ಲಿ ಉತ್ಪಾದನಾ ಘಟಕ ನಿರ್ವಿುಸಲಾಗದು. ಅಮೆರಿಕ ದಿಂದ ಭಾರತಕ್ಕೆ ಆಮದು ಮಾಡಿಕೊಂಡು ಭಾರತದ ಕಂಪನಿಯ ಮೂಲಕ ಮಾರಾಟ ಮಾಡುವುದಕ್ಕೆ ಅವಕಾಶ ಕೊಡಬೇಕು. ಇದರ ಮೇಲೆ ಸೀಮಾ ಸುಂಕದಲ್ಲೂ ವಿನಾಯಿತಿ ಕೊಡಬೇಕೆಂಬುದು ಟೆಸ್ಲಾ ಕಂಪನಿ ಬೇಡಿಕೆ. ಚೀನಾದಲ್ಲಿ ಉತ್ಪಾದನಾ ಘಟಕ ಆರಂಭಿಸಿ ಅಲ್ಲಿಂದ ಭಾರತಕ್ಕೆ ಕಾರುಗಳನ್ನು ಆಮದು ಮಾಡಿಕೊಳ್ಳಲು ಕಂಪನಿ ಉತ್ಸುಕವಾಗಿದೆ. ಈ ನಡೆಯಿಂದ ಆಮದು ವೆಚ್ಚ ಮತ್ತು ಇತರೆ ವೆಚ್ಚ ಕಡಿಮೆ ಮಾಡಿಕೊಳ್ಳಲು ಟೆಸ್ಲಾ ಬಯಸಿದೆ.

ಭಾರತ ಸರ್ಕಾರದ ನಿಲುವೇನು?: ಟೆಸ್ಲಾ ಕಂಪನಿ ಭಾರತದಲ್ಲಿ ಉತ್ಪಾದನಾ ಘಟಕವನ್ನು ಹೊಂದಿ ಮೇಕ್ ಇನ್ ಇಂಡಿಯಾ ಉಪಕ್ರಮದ ಪ್ರಕಾರದ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸಬೇಕು. ತೆರಿಗೆ ಮತ್ತು ಇತರೆ ಪ್ರಯೋಜನಗಳನ್ನು ಪಡೆಯಬೇಕು. ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡುವುದೇ ಆದರೆ ದುಪ್ಪಟ್ಟು ಸುಂಕ ಪಾವತಿಸಬೇಕೆಂಬುದು ಸರ್ಕಾರದ ನಿಲುವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net