

| ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
ಧಾರವಾಡ, ಉತ್ತರಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಪಶ್ಚಿಮಘಟ್ಟ ಪ್ರದೇಶವು ಭಯೋತ್ಪಾದಕರಿಗೆ ಬಂದೂಕು ಬಳಕೆ, ಬಾಂಬ್ ಸ್ಪೋಟದ ತರಬೇತಿ ಪಡೆಯುವ ಪ್ರಶಸ್ತ ತಾಣವಾಗಿದೆ ಎನ್ನುವ ಆತಂಕಕಾರಿ ಅಂಶ ಮತ್ತೊಮ್ಮೆ ಬೆಳಕಿಗೆ ಬಂದಿದೆ.
2008ರಲ್ಲಿ ಬಂಧಿತರಾಗಿದ್ದ ಶಂಕಿತರು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ತರಬೇತಿ ಪಡೆಯುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿತ್ತು. ಇದೀಗ ದೆಹಲಿ ಪೊಲೀಸರಿಗೆ ಸೆರೆ ಸಿಕ್ಕ ಮೂವರು ಶಂಕಿತ ಉಗ್ರರೂ ಹುಬ್ಬಳ್ಳಿ-ಧಾರವಾಡ ಸೇರಿ ಪಶ್ಚಿಮಘಟ್ಟದ ಕಾಡುಗಳನ್ನು ತಾವು ತರಬೇತಿ ತಾಣಗಳನ್ನಾಗಿ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾಗಿ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಶಂಕಿತ ಐಸಿಸ್ ಉಗ್ರ ಮೊಹಮ್ಮದ್ ಶಹನವಾಜ್ ಮತ್ತು ಆತನ ಇಬ್ಬರು ಸಹಚರರನ್ನು ದೆಹಲಿ ವಿಶೇಷ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಈ ಭಾಗದಲ್ಲಿ ತರಬೇತಿ ಕ್ಯಾಂಪ್ ಮಾಡಲು ಓಡಾಡಿರುವ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ.
ಕಲಘಟಗಿ ಕಾಡಿನಲ್ಲಿ ಟ್ರೇನಿಂಗ್: ಸಿಮಿ ಉಗ್ರರೊಂದಿಗೆ ನಂಟು ಹೊಂದಿರುವ ಶಂಕೆ ಮೇಲೆ 2008ರ ಜನವರಿಯಲ್ಲಿ ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಭಯೋತ್ಪಾದನಾ ನಿಗ್ರಹ ಪೊಲೀಸರು 17 ಜನರನ್ನು ಬಂಧಿಸಿದ್ದರು. ಈ ವೇಳೆ ಸ್ಪೋಟಕ ಮತ್ತು ಜಿಹಾದಿ ಸಾಹಿತ್ಯ ವಶಕ್ಕೆ ಪಡೆಯಲಾಗಿತ್ತು. ಬಂಧಿತರ ಪೈಕಿ ಮೂವರು ಧಾರ್ವಿುಕ ದೇಗುಲಗಳಿಂದ ಸುತ್ತುವರಿದಿರುವ ಕಲಘಟಗಿ ಕಾಡಿನಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ ಬಗ್ಗೆ ಬಾಯ್ಬಿಟ್ಟಿದ್ದರು. ಕ್ಯಾಂಪ್ನಲ್ಲಿ ಪಾಕ್ಧ್ವಜಗಳು ಹಾರುತ್ತಿರುವುದನ್ನು ಗಮನಿಸಿದ್ದ ತನಿಖಾ ತಂಡ ಅವುಗಳನ್ನು ತೆಗೆದುಹಾಕಿತ್ತು. ಇದು ಭಯೋತ್ಪಾದಕ ಜಾಲವು ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ರಾಜ್ಯದ ಪಶ್ಚಿಮಘಟ್ಟದಲ್ಲಿಯೂ ವ್ಯಾಪಿಸಿದೆ ಎನ್ನುವುದನ್ನು ರುಜುವಾತು ಪಡಿಸಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ 2015ರಲ್ಲಿ ಬಂಧಿತರು ಆರೋಪಮುಕ್ತವಾಗಿದ್ದರು. ಆದರೀಗ ಶಂಕಿತ ಐಸಿಸ್ ಉಗ್ರ ಮೊಹಮ್ಮದ್ ಶಹನವಾಜ್ ಮತ್ತು ಆತನ ಇಬ್ಬರು ಸಹಚರರು ಹುಬ್ಬಳ್ಳಿ-ಧಾರವಾಡ ಹಾಗೂ ಪಶ್ಚಿಮಘಟ್ಟ ಭಾಗದಲ್ಲಿ ತರಬೇತಿ ಕ್ಯಾಂಪ್ ರಚಿಸಲು ಓಡಾಡಿದ್ದಾಗಿ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಹಿಂದಿನ ಪ್ರಕರಣದಲ್ಲಿ ವಾಸ್ತವಾಂಶವಿತ್ತು ಎನ್ನುವುದನ್ನು ಬಿಂಬಿಸುತ್ತದೆ. ಜತೆಗೆ, ಉಗ್ರರ ಹೆಜ್ಜೆ ಗುರುತು ಈ ಭಾಗದಲ್ಲಿ ಆಗಾಗ ಮೂಡುತ್ತಲೇ ಇದೆ ಎನ್ನುವುದನ್ನು ಖಾತರಿಪಡಿಸುತ್ತದೆ.
ಪಶ್ಚಿಮಘಟ್ಟವೇ ಏಕೆ?: ಪಶ್ಚಿಮಘಟ್ಟ ಪ್ರದೇಶವು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತ.ನಾಡು ರಾಜ್ಯಗಳಲ್ಲಿ ವ್ಯಾಪಿಸಿದೆ. ಕಡಿದಾದ ಕಾಡಿನಿಂದ ಆವೃತವಾಗಿರುವ ಈ ಪ್ರದೇಶವು ದುರ್ಗಮವಾಗಿದೆ. ಕಾಡಿನೊಳಗೆ ಪ್ರವೇಶ ಕಷ್ಟಸಾಧ್ಯ. ಈ ಕಾರಣಕ್ಕಾಗಿಯೇ ಉಗ್ರರು ಇಲ್ಲಿ ಚಟುವಟಿಕೆ ನಡೆಸಿರುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಸೆರೆಯಾದ ಮೂವರು ಶಂಕಿತರು ಧಾರವಾಡದಲ್ಲಿ ತರಬೇತಿ ಪಡೆದಿದ್ದರು ಎನ್ನಲಾಗಿದ್ದು, ಉಗ್ರರು ದೇಶದಲ್ಲಿ ಬಂದು ತರಬೇತಿ ಕೊಡುತ್ತಿದ್ದಾರೆಂದರೆ ಅದು ಕೇಂದ್ರದ ವೈಫಲ್ಯ. ಹೀಗಾಗಿ ಕೇಂದ್ರದ ಬಿಜೆಪಿ ಸರ್ಕಾರವೇ ಇದಕ್ಕೆ ಉತ್ತರ ಕೊಡಬೇಕು.| ಸಂತೋಷ ಲಾಡ್, ಕಾರ್ವಿುಕ ಸಚಿವ ದೆಹಲಿ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಅಧಿಕೃತವಾಗಿ ಎಲ್ಲಿ ತರಬೇತಿ ನಡೆದಿತ್ತು ಎನ್ನುವುದನ್ನು ಖಾತರಿ ಪಡಿಸಿಲ್ಲ. ಯಾವುದಕ್ಕೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ.| ರೇಣುಕಾ ಸುಕುಮಾರ್, ಹು-ಧಾ ಪೊಲೀಸ್ ಆಯುಕ್ತೆ
ಗನ್ಗಳ ಬಳಕೆ ಪ್ರಾಕ್ಟೀಸ್: 2008ರಲ್ಲಿ ಬಂಧಿತ ಮೂವರು ಆರೋಪಿಗಳ ಮೇಲೆ ಕಲಘಟಗಿಯಲ್ಲಿ ನೆಲೆ ಸ್ಥಾಪಿಸಿ ಜಿಹಾದಿ ಮುಷ್ಕರಕ್ಕೆ ತಯಾರಿ ನಡೆಸಿದ್ದರು ಎನ್ನುವ ಆರೋಪವಿತ್ತು. 20ಕ್ಕೂ ಹೆಚ್ಚು ಇಸ್ಲಾಂ ಮೂಲಭೂತವಾದಿಗಳು ಕಲಘಟಗಿಗೆ ಆಗಾಗ ಭೇಟಿ ನೀಡುತ್ತಿದ್ದರು. ಅವರಿಗೆ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಡಬಲ್ ಬ್ಯಾರೆಲ್ ಗನ್ಗಳ ಬಳಕೆಯನ್ನು ಕಳಿಸಿಕೊಡಲಾಗುತ್ತಿತ್ತು ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದರು.
2. 2012ರಲ್ಲಿ ಲಷ್ಕರೆ ತೋಯ್ಬಾ ಹಾಗೂ ಹೂಜಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಐವರನ್ನು ಬಂಧಿಸಲಾಗಿತ್ತು.
3. 2019ರಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಲಘು ಸ್ಫೋಟ ನಡೆದಿತ್ತು. ಸ್ಪೋಟಕವಿದ್ದ ಬಾಕ್ಸ್ ಮೇಲೆ ನೋ ಆರ್ಎಸ್ಎಸ್, ನೋ ಬಿಜೆಪಿ ಎಂದು ಬರೆಯಲಾಗಿತ್ತು. ಇದೇ ಸಮಯದಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆದಿತ್ತು.
ಕಾಸರಗೋಡು: ಉಗ್ರ ಶಹನವಾಜ್ ಅಲಿಯಾಸ್ ಶಾಫಿ ಉಸಾಮು ಕಾಸರಗೋಡು, ಕಣ್ಣೂರಿಗೂ ಭೇಟಿ ನೀಡಿದ್ದನೆಂಬ ಮಾಹಿತಿ ಬೆಳಕಿಗೆ ಬಂದಿದೆ. ಕೇರಳದ ಪಶ್ಚಿಮಘಟ್ಟಕ್ಕೆ ಸೇರಿದ ಪ್ರದೇಶಗಳಲ್ಲಿ ಐಸಿಸ್ ಸಂಘಟನೆಯ ಧ್ವಜ ಸ್ಥಾಪಿಸಿ, ಅಲ್ಲಿನ ಫೋಟೋ ತೆಗೆಸಿಕೊಂಡಿರುವ ಬಗ್ಗೆ ಎನ್ಐಎಗೆ ಮಾಹಿತಿ ಲಭಿಸಿದೆ. ಈ ಫೊಟೋಗಳನ್ನು ಎನ್ಐಎ ವಶಪಡಿಸಿಕೊಂಡಿದೆ. ಈತ ಕೇರಳದ ವಿವಿಧೆಡೆ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿರುವುದನ್ನೂ ಎನ್ಐಎ ಪತ್ತೆಹಚ್ಚಿತ್ತು. ಕೇರಳದಲ್ಲಿ 2016ರಿಂದ ಐಸಿಸ್ ಸಂಪರ್ಕ ಪಡೆದಿದ್ದ ಹಲವು ಮಂದಿ ನಿಗೂಢವಾಗಿ ನಾಪತ್ತೆಯಾಗಿದ್ದು, ಇವರೆಲ್ಲರೂ ಐಸಿಸ್ ಯುದ್ಧಕೇಂದ್ರ ಸಿರಿಯಾ, ಅಫ್ಘಾನಿಸ್ತಾನಕ್ಕೆ ತಲುಪಿರುವುದು ತನಿಖೆಯಿಂದ ಮಾಹಿತಿ ಲಭಿಸಿತ್ತು.
ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಘಟಕ ಸೋಮವಾರ ಬಂಧಿಸಿದ ಮೂವರು ಶಂಕಿತ ಐಸಿಸ್ ಭಯೋತ್ಪಾದಕರು ಅಯೋಧ್ಯೆಯ ರಾಮಮಂದಿರ ಸೇರಿ ಉತ್ತರ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಉದ್ದೇಶಿಸಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಯೋಧ್ಯೆಯ ರಾಮಮಂದಿರ ಮತ್ತು ಮುಂಬೈನ ಚಾಬಾದ್ ಹೌಸ್ ದಾಳಿಗೆ ಯೋಜನೆ ರೂಪಿಸಿದ್ದರು. ದೇಶದ ಹಲವು ಉನ್ನತ ನಾಯಕರು ಕೂಡ ಅವರ ಟಾರ್ಗೆಟ್ ಆಗಿದ್ದರು ಎಂದು ವಿಚಾರಣೆ ವೇಳೆ ಶಂಕಿತರು ಬಾಯ್ಬಿಟ್ಟಿದ್ದಾರೆ. ಬಂಧಿತರಿಂದ ಸುಧಾರಿತ ಸ್ಪೋಟಕ ಸಾಧನಗಳನ್ನು (ಐಇಡಿ) ತಯಾರಿಸಲು ಬಳಸುವ ದ್ರವ ರಾಸಾಯನಿಕ ಸೇರಿ ಹಲವಾರು ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ವಸ್ತುಗಳನ್ನು ಅವರು ಬಾಂಬ್ ತಯಾರಿಸಲು ಬಳಸುತ್ತಿದ್ದರು ಎನ್ನಲಾಗಿದೆ.
ಪ್ರಮುಖ ಶಂಕಿತ ಮೊಹಮ್ಮದ್ ಶಹನವಾಜ್ ಅಲಿಯಾಸ್ ಶಫಿ ಉಜ್ಜಮಾ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ. ವಿದೇಶಿ ಹ್ಯಾಂಡ್ಲರ್ಗಳ ಸೂಚನೆಗಳನ್ನು ಆಧರಿಸಿ ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.