

ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತ ಸರ್ಕಾರ ನಿಷೇಧಿಸಿರುವ, ಮೂರು ಕುಖ್ಯಾತ ಉಗ್ರಗಾಮಿ ಸಂಘಟನೆಗಳು ಒಂದಾಗಿ ಪಾಕಿಸ್ತಾನದ ಸೇನಾ ಕ್ಯಾಂಪಸ್ ಪಕ್ಕದಲ್ಲೇ ಟೆರರ್ ಫ್ಯಾಕ್ಟರಿ (ಭಯೋತ್ಪಾದಕರ ತರಬೇತಿ ಕೇಂದ್ರ) ಆರಂಭಿಸಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಅಂದ ಹಾಗೆ ಭಾರತ ರಾತ್ರೋರಾತ್ರಿ ಸರ್ಜಿಕಲ್ ಸ್ಟ್ರೈಕ್ ಮೂಲಕ ನುಗ್ಗಿ ಹೊಡೆದಿದ್ದ ಬಾಲಾಕೋಟ್ನಿಂದ ಕೇವಲ 62 ಕಿ.ಮೀ ದೂರದಲ್ಲಿ ಈ ಉಗ್ರನೆಲೆ ತಲೆ ಎತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ಕುಖ್ಯಾತ ಉಗ್ರ, ಅಮೆರಿಕ ಮೇಲಿನ ಸರಣಿ ದಾಳಿಯ ಸಂಚುಕೋರ ಒಸಮಾ ಬಿನ್ಲಾಡೆನ್ನ ಅಡಗುತಾಣ ಅಬೋತಾಬಾದ್ನಲ್ಲಿ ಉಗ್ರ ಫ್ಯಾಕ್ಟರಿ ಆರಂಭವಾಗಿದೆ. ಭಯೋತ್ಪಾದನಾ ಸಂಘಟನೆಗಳಾದ ಲಷ್ಕರ್-ಎ-ತಯ್ಬಾ, ಹಿಜ್ಬುಲ್ ಮುಜಾಹಿದಿನ್ ಮತ್ತು ಜೈಷ್-ಎ-ಮಹಮದ್ ಒಂದಾಗಿ ಈ ಉಗ್ರ ನೆಲೆ ಸ್ಥಾಪಿಸಿರುವುದಾಗಿ ಗುಪ್ತಚರ ಸಂಸ್ಥೆಗಳು ಹೇಳಿವೆ. ಐಎಸ್ಐ ಅಧಿಕಾರಿ ಉಸ್ತುವಾರಿ: ಪಾಕ್ನ ಗುಪ್ತಚರ ಸಂಸ್ಥೆ ಐಎಸ್ಐಗೆ ನೇಮಕ ಮಾಡಲಾಗಿರುವ ಸೇನೆಯ ಒಬ್ಬ ಜನರಲ್, ಉಗ್ರರ ತರಬೇತಿ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಮೋಸ್ಟ್ ವಾಂಟೆಡ್ ತ್ರಿಮೂರ್ತಿಗಳು: ಅಬೋತಾಬಾದ್ ಟೆರರ್ ಫ್ಯಾಕ್ಟರಿಯನ್ನು ಲಷ್ಕರ್, ಹಿಜ್ಬುಲ್ ಮತ್ತು ಜೈಷ್ ಸಂಘಟನೆಗಳ ಮುಖ್ಯಸ್ಥರಾದ ಹಫೀಜ್ ಸಯೀದ್, ಸೈಯದ್ ಸಲಾಹುದ್ದಿನ್ ಮತ್ತು ಮಸೂದ್ ಅಜರ್ ನಡೆಸುತ್ತಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಗುಪ್ತಚರ ಮೂಲಗಳು ಹೇಳಿವೆ. ಈ ತ್ರಿಮೂರ್ತಿಗಳು ಉಗ್ರ ನಿಗ್ರಹ ಸಂಸ್ಥೆಯಾದ ರಾಷ್ಟ್ರೀಯ ಭದ್ರತಾ ಸಂಸ್ಥೆಯ (ಎನ್ಐಎ) ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿದ್ದಾರೆ.
ಕಾಶ್ಮೀರ ಹಿಂಸೆಯಲ್ಲಿ ಕೈವಾಡ: ಜಮ್ಮು ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದ ಸರಣಿ ಭಯೋತ್ಪಾದನಾ ದಾಳಿಗಳ ಬೆನ್ನಲ್ಲೇ ಉಗ್ರರ ತರಬೇತಿ ಫ್ಯಾಕ್ಟರಿ ಕುರಿತ ಮಾಹಿತಿ ಸ್ಪೋಟಗೊಂಡಿದೆ. ಬಾರಾಮುಲ್ಲಾ ದಾಳಿಯಲ್ಲಿ ತಲಾ ಇಬ್ಬರು ಯೋಧರು ಮತ್ತು ನಾಗರಿಕರು ಮೃತಪಟ್ಟಿದ್ದರು. ಇತರ ಮೂವರು ಗಾಯಗೊಂಡಿದ್ದರು. ಬಾರಾಮುಲ್ಲಾ ದಾಳಿಗೂ ಕೆಲವೇ ಗಂಟೆಗೆ ಮುಂಚೆ, ಉತ್ತರ ಪ್ರದೇಶದ ಇಬ್ಬರು ವಲಸೆ ಕಾರ್ವಿುಕರನ್ನು ಗುಂಡೇರ್ಬಾಲ್ನಲ್ಲಿ ಉಗ್ರರು ಗುಂಡಿಟ್ಟು ಕೊಂದಿದ್ದರು. ಗುಂಡೇರ್ಬಾಲ್ನಲ್ಲೇ ಅದಕ್ಕೂ ಮೂರು ದಿನಗಳ ಹಿಂದೆ ಆರು ನಿರ್ಮಾಣ ಕಾರ್ವಿುಕರು ಹಾಗೂ ಒಬ್ಬ ವೈದ್ಯ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಗುರುವಾರ ಇಬ್ಬರು ಸೈನಿಕರ ಸಹಿತ ನಾಲ್ವರ ಪ್ರಾಣ ಹರಣಕ್ಕೆ ಕಾರಣವಾದ ದುಷ್ಕರ್ವಿುಗಳ ಶೋಧಕ್ಕೆ ಗುಲ್ಮಾರ್ಗ್ ವಲಯದ ನಿಯಂತ್ರಣ ರೇಖೆಯುದ್ದಕ್ಕೂ (ಎಲ್ಒಸಿ) ನಡೆಯುತ್ತಿರುವ ವ್ಯಾಪಕ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹೆಲಿಕಾಪ್ಟರ್ಗಳು ಮತ್ತು ಡ್ರೋನ್ಗಳನ್ನು ಬಳಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆದ ಸ್ಥಳ ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶಗಳು ಹಾಗೂ ಎಲ್ಒಸಿಯಲ್ಲಿ ಶುಕ್ರವಾರ ಬೆಳಗ್ಗೆ ಆರಂಭವಾದ ಕಾರ್ಯಾಚರಣೆಯನ್ನು ನಂತರ ಒಳನಾಡು ಪ್ರದೇಶಗಳಿಗೂ ವಿಸ್ತರಿಸಲಾಗಿದೆ.
ಕಳಚಿತು ಪಾಕಿಸ್ತಾನದ ಬಣ್ಣ: ಜಾಗತಿಕ ಮಟ್ಟದಲ್ಲಿ, ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವುದಾಗಿ ಕೊಚ್ಚಿಕೊಳ್ಳುವ ಪಾಕಿಸ್ತಾನದ ನಿಜಬಣ್ಣ ಇದೀಗ ಬಯಲಾಗಿದೆ. ಉಗ್ರರ ತರಬೇತಿ ಶಿಬಿರದ ಪಕ್ಕದಲ್ಲೇ ಪಾಕ್ ಸೇನೆಯ ಒಂದು ಕ್ಯಾಂಪಸ್ ಇರುವುದರಿಂದ ಅದು ಭಯೋತ್ಪಾದಕರಿಗೆ ‘ಅತ್ಯಂತ ಸುರಕ್ಷಿತ’ ತಾಣವಾಗಿ ಮಾರ್ಪಟ್ಟಿರುವುದಾಗಿ ಹೇಳಲಾಗುತ್ತಿದೆ. ಮಿಲಿಟರಿಯ ಅನುಮತಿಯಿಲ್ಲದೆ ಆ ಭಾಗಕ್ಕೆ ಹೋಗಲು ಹೊರಗಿನ ಯಾರಿಗೂ ಸಾಧ್ಯವಾಗದ ಕಾರಣ ಟೆರರ್ ಫ್ಯಾಕ್ಟರಿ ಸುರಕ್ಷಿತವೆನಿಸಿದೆ.
ಬಿನ್ ಲಾಡೆನ್ ಅಡಗುತಾಣ: ಅಬೊತಾಬಾದ್ನಲ್ಲೇ ಅಮೆರಿಕದಿಂದ ಹತನಾದ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಅಡಗಿದ್ದ. ಲಾಡೆನ್ ಇದ್ದ ಕಟ್ಟಡವನ್ನೇ ಪುನಶ್ಚೇತನಗೊಳಿಸಿ ತರಬೇತಿ ಕೇಂದ್ರ ನಡೆಸಲಾಗುತ್ತಿದೆಯೇ ಎನ್ನುವುದು ಇನ್ನೂ ಖಚಿತಪಟ್ಟಿಲ್ಲ. ಎತ್ತರದ ಗೋಡೆಯ ಆವರಣದೊಳಗಿನ ಸುರಕ್ಷಿತ ಮನೆಯಲ್ಲಿ ವಾಸವಿದ್ದ ಲಾಡೆನ್, ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದ. 2011ರ ಮೇ ತಿಂಗಳಲ್ಲಿ ಅಮೆರಿಕದ ಪಡೆಗಳು ಅದನ್ನು ಟಾರ್ಗೆಟ್ ಮಾಡಿ ನಡೆಸಿದ್ದ ಆಕ್ರಮಣದಲ್ಲಿ ಬಿನ್ ಲಾಡೆನ್ ಹತನಾಗಿದ್ದ.
ಏನೇನು ತರಬೇತಿ?: ಶಸ್ತ್ರಾಸ್ತ್ರಗಳ ನಿರ್ವಹಣೆ ಸಹಿತ ಯುದ್ಧದ ನಾನಾ ವಿಷಯಗಳಲ್ಲಿ ಯುವಕರು ಮತ್ತು ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ.