ಗ್ರಾಂಡ್​ ಸ್ಲಾಂಗಳಲ್ಲಿ ಹೆಚ್ಚಿನ ಬಹುಮಾನಕ್ಕೆ ಟೆನಿಸ್​ ತಾರೆಯರ ಬೇಡಿಕೆ

web tennis top
Published on

ಲಂಡನ್​: ನೊವಾಕ್​ ಜೋಕೊವಿಕ್​, ಜನ್ನಿಕ್​ ಸಿನ್ನರ್​, ಅರಿನಾ ಸಬಲೆಂಕಾ, ಕೋಕೋ ಗ್​ೌ ಸಹಿತ ವಿಶ್ವದ ಅಗ್ರ 20 ಟೆನಿಸ್​ ತಾರೆಯರು, ಗ್ರಾಂಡ್​ ಸ್ಲಾಂ ಟೂರ್ನಿಗಳ ಬಹುಮಾನ ಮೊತ್ತವನ್ನು ಏರಿಸಬೇಕೆಂದು ಸಂಟಕರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಜತೆಗೆ ಆಟಗಾರರ ಮೇಲೆ ಪರಿಣಾಮ ಬೀರುವಂಥ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ತಮ್ಮ ಅಭಿಪ್ರಾಯವನ್ನೂ ಪಡೆಯಬೇಕೆಂದು ತಿಳಿಸಿದ್ದಾರೆ.

ಆಸ್ಟ್ರೆಲಿಯನ್​ ಓಪನ್​, ್ರೆಂಚ್​ ಓಪನ್​, ವಿಂಬಲ್ಡನ್​ ಮತ್ತು ಯುಎಸ್​ ಓಪನ್​ ಟೂರ್ನಿಗಳ ಮುಖ್ಯಸ್ಥರನ್ನು ಉಲ್ಲೇಖಿಸಿ ಕಳೆದ ಮಾರ್ಚ್​ 21ರಂದು ಬರೆದಿರುವ ಪತ್ರದಲ್ಲಿ ಪುರುಷರ ಎಲ್ಲ ಅಗ್ರ 10 ಆಟಗಾರರ ಹಾಗೂ ಮಹಿಳೆಯರಲ್ಲಿ ಅಗ್ರ 11ರಲ್ಲಿ 10 ಆಟಗಾರ್ತಿಯರು ಸಹಿ ಹಾಕಿದ್ದಾರೆ. ಮಹಿಳೆಯರ ಅಗ್ರ 10ರಲ್ಲಿ ಎಲೆನಾ ರೈಬಕಿನಾ ಮಾತ್ರ ಪತ್ರಕ್ಕೆ ಸಹಿ ಹಾಕಿಲ್ಲ.

ಗ್ರಾಂಡ್​ ಸ್ಲಾಂ ಟೂರ್ನಿಗಳು ಪುರುಷ ಮತ್ತು ಮಹಿಳಾ ವೃತ್ತಿಪರ ಟೂರ್ನಿಗಳ ಆಟಗಾರರ ಕ್ಷೇಮಾಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವನ್ನೂ ನೀಡಬೇಕು. ಟೂರ್ನಿಯ ಆದಾಯದಲ್ಲಿ ಹೆಚ್ಚಿನ ಶೇಕಡವಾರು ಮೊತ್ತವನ್ನು ಆಟಗಾರರಿಗೆ ಹಂಚುವ ಸಲುವಾಗಿ ಬಹುಮಾನ ಮೊತ್ತವನ್ನು ಏರಿಸಬೇಕು. ಈ ಮೂಲಕ ಟೂರ್ನಿಯ ಯಶಸ್ಸಿಗೆ ಆಟಗಾರರು ನೀಡುವ ಕೊಡುಗೆಗೆ ತಕ್ಕ ಪ್ರತಿಲ ಸಿಗಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರಸಕ್ತ ಫ್ರೆಂಚ್​ ಓಪನ್​ ಮತ್ತು ಆಸ್ಟ್ರೆಲಿಯನ್​ ಓಪನ್​ ತಲಾ 495 ಕೋಟಿ ರೂ. ಬಹುಮಾನ ಮೊತ್ತ ಒಳಗೊಂಡಿದ್ದರೆ, ಕಳೆದ ವರ್ಷದ ವಿಂಬಲ್ಡನ್​ನಲ್ಲಿ 547 ಕೋಟಿ ರೂ. ಬಹುಮಾನ ಮೊತ್ತ ವಿತರಿಸಲಾಗಿತ್ತು. ಯುಎಸ್​ ಓಪನ್​ನಲ್ಲಿ ಕಳೆದ ವರ್ಷ ದಾಖಲೆಯ 641 ಕೋಟಿ ರೂ. ಅಂದರೆ 2023ಕ್ಕಿಂತ ಶೇ. 15 ಅಧಿಕ ಬಹುಮಾನ ಹಂಚಲಾಗಿತ್ತು. ಹಾಲಿ ವರ್ಷದ ಮುಂದಿನ ಗ್ರಾಂಡ್​ ಸ್ಲಾಂ ಟೂರ್ನಿ ಫ್ರೆಂಚ್​ ಓಪನ್​ ಆಗಿದ್ದು, ಮೇ 25ರಿಂದ ಪ್ಯಾರಿಸ್​ನಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net