ಇಂದಿರಾ ಕ್ಯಾಂಟೀನ್​ ಟೆಂಡರ್​ನಲ್ಲಿ ಆಗಲಿದೆ ಬದಲಾವಣೆ?

Indira Canteen (1)
Published on

ಬೆಂಗಳೂರು: ಮಹಾನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಪುನಶ್ಚೇತನಗೊಳಿಸಿ ಅವುಗಳನ್ನು ಇನ್ನಷ್ಟು ಜನಸ್ನೇಹಿ ಆಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ಹೊಸದಾಗಿ ವಲಯವಾರು ಟೆಂಡರ್ ಆಹ್ವಾನಿಸಲು ಚಿಂತನೆ ನಡೆಸಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್‌ಗಳನ್ನು ಸಬಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕ್ಯಾಂಟೀನ್‌ಗಳ ಮೂಲಕ ಬಡ ಜನರಿಗೆ ಹಸಿವು ನೀಗಿಸುವ ತಾಣಗಳಾಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಜತೆಗೆ ಗುಣಮಟ್ಟದ ಆಹಾರ ವಿತರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.

ಸದ್ಯದಲ್ಲೇ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಇಂದಿರಾ ಕ್ಯಾಂಟೀನ್‌ಗಳ ಪುನಶ್ಚೇತನಕ್ಕೆ ಅನುದಾನ ನಿಗದಿಪಡಿಸಲಾಗುತ್ತದೆ. ಹೆಚ್ಚುವರಿ ಕ್ಯಾಂಟೀನ್ ತೆರೆಯಲು ಸರ್ಕಾರ ಅವಕಾಶ ಮಾಡಿಕೊಡುವ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲ ಕೊರತೆ ಉಂಟಾಗದಂತೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ತರಲಿದೆ.

ಪಾಲಿಕೆ ಬದ್ದವಾಗಿದೆ

ಜತೆಗೆ ತಿನಿಸುಗಳ ದರ ಹೆಚ್ಚಳ ಮಾಡದೆ ಇನ್ನಷ್ಟು ಹೊಸ ಮೆನು ಸೇರ್ಪಡೆ ಮಾಡುವಂತೆ ಪಾಲಿಕೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಒಪ್ಪಿಗೆ ದೊರೆತ ಬಳಿಕ ಇಂದಿರಾ ಕ್ಯಾಂಟೀನ್‌ಗಳನ್ನು ಇನ್ನಷ್ಟು ಉತ್ತಮವಾಗಿ ನಡೆಸಲು ವಲಯವಾರು ಟೆಂಡರ್ ಆಹ್ವಾನಿಸುವತ್ತ ಪಾಲಿಕೆ ದೃಷ್ಟಿ ಹರಿಸಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ರೂಪ ನೀಡಲು ಪಾಲಿಕೆ ಬದ್ಧವಾಗಿದೆ. ಕ್ಯಾಂಟೀನ್‌ಗಳು ಯಾವುದೇ ಸಮಸ್ಯೆಗಳಿಲ್ಲದೆ ಸುಗಮವಾಗಿ ನಡೆಸಿಕೊಂಡು ಹೋಗಲು ವಲಯವಾರು ಟೆಂಡರ್ ನೀಡುವ ಪ್ರಸ್ತಾಪ ಇದೆ. ಒಬ್ಬ ಗುತ್ತಿಗೆದಾರರಿಗೆ ಗರಿಷ್ಠ ಎರಡು ವಲಯದ ಗುತ್ತಿಗೆ ನೀಡುವ ಸಾಧ್ಯತೆ ಇದೆ. ಸದ್ಯಕ್ಕೆ ಈ ವಿಷಯ ಚರ್ಚೆಯಲ್ಲಿದ್ದು, ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net