ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಪ್ರಸ್ತುತ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಪ್ರದೇಶಗಳಲ್ಲಿ ವರ್ಷಧಾರೆ ಹಿಂದೆ ಸರಿದಂತಿದೆ.
ಮಂಗಳವಾರ ಕರಾವಳಿಯ ಉತ್ತರಕನ್ನಡ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿಯೂ ಭಾರೀ ವರ್ಷಧಾರೆ ಆಗಿದೆ. ಮಲೆನಾಡು ಒಳಗೊಂಡ ಒಳನಾಡು ವ್ಯಾಪ್ತಿಯಲ್ಲಿ ಮೋಡ ಆವರಿಸಿದ್ದರೂ, ಮಳೆ ಸುರಿಯುತ್ತಿಲ್ಲ. ಆಷಾಢ ಮಾಸದಲ್ಲಿ ಆರ್ದ್ರಾ ಮಳೆ ಭೂಮಿಯನ್ನು ಹೆಚ್ಚು ತಣಿಸದು ಎಂಬ ನಂಬಿಕೆ ಮತ್ತೆ ದೃಢಪಟ್ಟಿದೆ.
ಕಾವೇರಿ ಹಾಗೂ ಕೃಷ್ಣಾ ಕಣಿವೆ ವ್ಯಾಪ್ತಿಯ ಪ್ರದೇಶದಲ್ಲಿ ಮಳೆ ಸಮರ್ಪಕವಾಗಿ ಆಗಿಲ್ಲ. ಇದರಿಂದ ಜಲಾಶಯಗಳಿಗೆ ಹರಿದುಬರಬೇಕಿದ್ದ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಮುಖ್ಯವಾಗಿ ಬಯಲು ಸೀಮೆ ಹಾಗೂ ಉತ್ತರ ಒಳನಾಡಿನ ಹಲವು ಹಳ್ಳಿಗರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ಮುಂಗಾರಿ ಬಿತ್ತನೆ ಕುಂಠಿತಗೊಂಡಿದೆ.
ಕರಾವಳಿ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದೆ. ಮುಂದಿನ 48 ಗಂಟೆಗಳ ಕಾಲ ಇದೇ ಸ್ಥಿತಿ ಮುಂದುವರಿಯಲಿದೆ. ರಾಜಧಾನಿ ಬೆಂಗಳೂರು ಸುತ್ತಮುತ್ತ ಮೋಡ ಮುಸುಕಿದ ವಾತಾವರಣ ಇದ್ದರೂ, ಕೆಲವೆಡೆ ಮಾತ್ರ ಗುಡುಗುಸಹಿತ ಮಳೆಯಾಗಬಹುದು. ಮೇಲ್ಮೈ ಗಾಳಿ ಜೋರಾಗಿ ಬೀಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.