

ಬೆಂಗಳೂರು: ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 10 ಐಎಎಸ್ ಅಧಿಕಾರಿಗಳನ್ನು ಇಂದು (ಜೂ. 16) ವರ್ಗಾವಣೆ ಮಾಡಿದೆ.
ಐಎಎಸ್ ಅಧಿಕಾರಿಗಳಾದ ಪಲ್ಲವಿ ಅಕುರಥಿ, ಡಾ. ವೆಂಕಟೇಶ್ ಎಂ, ರವೀಂದ್ರ ಪಿ.ಎನ್, ಶ್ರೀನಿವಾಸ್ ಕೆ, ಜಾನಕಿ ಕೆ.ಎಂ., ಮುಲ್ಲೈ ಮುಹಿಲನ್ ಎ.ಪಿ., ಯೋಗೇಶ್ ಎ.ಎಂ., ಡಾ. ಕುಮಾರ, ಪ್ರಭು ಜಿ ಮತ್ತು ನವೀನ್ ಕುಮಾರ್ ರಾಜು ಅವರನ್ನು ತಕ್ಷಣ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಹಣಕಾಸು ನೀತಿ ಸಂಸ್ಥೆಯ ಹೆಚ್ಚುವರಿ ನಿರ್ದೇಶಕರಾಗಿದ್ದ ಪಲ್ಲವಿ ಅಕುರಥಿ ಅವರನ್ನು ಸಕಾಲ ಮಿಷನ್ನ ಹೆಚ್ಚುವರಿ ಮಿಷನ್ ನಿರ್ದೇಶಕರಾಗಿ ಮುಂದಿನ ಆದೇಶದವರೆಗೂ ವರ್ಗಾವಣೆ ಮಾಡಲಾಗಿದೆ. ಇದಕ್ಕೂ ಮೊದಲು ಸಕಾಲ ಮಿಷನ್ನ ಹೆಚ್ಚುವರಿ ಮಿಷನ್ ನಿರ್ದೇಶಕರಾಗಿದ್ದ ಜಾನಕಿ ಕೆ. ಎಂ. ಅವರನ್ನು ಬಾಗಲಕೋಟೆಯ ಡೆಪ್ಯುಟಿ ಕಮಿಷನರ್ ಆಗಿ ವರ್ಗಾಯಿಸಲಾಗಿದೆ.
ಬೆಂಗಳೂರಿನ ಜಲಾನಯನ ಅಭಿವೃದ್ಧಿ ಇಲಾಖೆಯ ಕಮಿಷನರ್ ಆಗಿದ್ದ ಡಾ. ವೆಂಕಟೇಶ್ ಎಂ.ವಿ. ಅವರನ್ನು ಬೆಂಗಳೂರಿನ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಯೋಜನೆ)ರಾಗಿದ್ದ ರವೀಂದ್ರ ಪಿ.ಎನ್. ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಗಿ, ಬೆಂಗಳೂರಿನ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀನಿವಾಸ್ ಕೆ. ಅವರನ್ನು ತುಮಕೂರು ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಗಿ, ಸ್ಮಾರ್ಟ್ ಆಡಳಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಮುಲ್ಲೈ ಮುಹಿಲಾನ್ ಎಂ.ಪಿ. ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಗಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡಾ. ಕುಮಾರ್ ಅವರನ್ನು ಮಂಡ್ಯ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಗಿ ವರ್ಗಾಯಿಸಲಾಗಿದೆ.
ಬೆಂಗಳೂರಿನ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರಾಗಿದ್ದ ಯೋಗೇಶ್ ಎ.ಎಂ. ಅವರನ್ನು ಬೆಂಗಳೂರಿನ ರಸ್ತೆ ಮತ್ತು ಸಾರಿಗೆ ಸುರಕ್ಷತಾ ಕಮಿಷನರ್ ಆಗಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಪ್ರಭು ಜಿ. ಅವರನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮಿಷನರ್ ಆಗಿ ಮತ್ತು ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿದ್ದ ನವೀನ್ ಕುಮಾರ್ ರಾಜು ಎಸ್. ಅವರನ್ನು ಕರ್ನಾಟಕ ವಸತಿ ಸಂಸ್ಥೆಗಳ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.