

ಚೆನ್ನೈ: ತಮಿಳುನಾಡಿನ ಮಾಜಿ ಪೊಲೀಸ್ ಮಹಾ ನಿರ್ದೇಶಕ ರಾಜೇಶ್ ದಾಸ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪ ಸಾಬೀತಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಮಹಿಳಾ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ರಾಜೇಶ್ ದಾಸ್ ಅವರನ್ನು ತಮಿಳುನಾಡಿನ ವಿಲ್ಲುಪುರಂ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿದ್ದು, ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಇದೇ ಆರೋಪದ ಮೇಲೆ ಈಗಾಗಲೇ ಅಮಾನತಿನಲ್ಲಿದ್ದ, ರಾಜೇಶ್ ದಾಸ್, ಇದೀಗ ಕಂಬಿ ಎಣಿಸುವಂತಾಗಿದೆ.
ಸಂತ್ರಸ್ತ ಮಹಿಳಾ ಐಪಿಎಸ್ ಅಧಿಕಾರಿಯು, ಹಿರಿಯ ಅಧಿಕಾರಿಯಾಗಿದ್ದ ರಾಜೇಶ್ ದಾಸ್ ವಿರುದ್ಧ 2021ರ ಫೆಬ್ರವರಿಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ಭದ್ರತಾ ಕರ್ತವ್ಯಕ್ಕೆ ತೆರಳುವಾಗ ರಾಜೇಶ್ ದಾಸ್ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಅಂದಿನ ಎಐಎಡಿಎಂಕೆ ಸರ್ಕಾರ ದಾಸ್ ಅವರನ್ನು ಅಮಾನತು ಮಾಡಿತ್ತು ಮತ್ತು ಪ್ರಕರಣದ ತನಿಖೆಗೆ ಆರು ಸದಸ್ಯರ ಸಮಿತಿ ರಚನೆ ಮಾಡಿತ್ತು.
ಈ ಪ್ರಕರಣದಲ್ಲಿ ನ್ಯಾಯಾಲಯ ಪೊಲೀಸ್ ಸಿಬ್ಬಂದಿ ಸೇರಿದಂತೆ 68 ಮಂದಿಯಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದು, ಇದೀಗ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ, ಮೇಲ್ಮನವಿ ಸಲ್ಲಿಸಲು ರಾಜೇಶ್ ದಾಸ್ಗೆ ಅವಕಾಶ ನೀಡಲಾಗಿದೆ ಮತ್ತು ತಕ್ಷಣದ ಜಾಮೀನು ಪಡೆಯಬಹುದು ಎಂದು ಕೋರ್ಟ್ ತಿಳಿಸಿದೆ.
ಈ ಘಟನೆ 2021ರಲ್ಲಿ ಚುನಾವಣಾ ವಿಷಯವಾಗಿ ಬದಲಾಗಿತ್ತು ಮತ್ತು ಆಗಿನ ಪ್ರತಿಪಕ್ಷದ ನಾಯಕರಾಗಿದ್ದ ಎಂಕೆ ಸ್ಟಾಲಿನ್ ಅವರು ಅಧಿಕಾರಕ್ಕೆ ಬಂದರೆ, ಸರಿಯಾದ ಕಾನೂನು ಪ್ರಕ್ರಿಯೆ ನಡೆಸಿ, ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದರು. (ಏಜೆನ್ಸೀಸ್)