

ಬೆಂಗಳೂರು ಗ್ರಾಮಾಂತರ: ದೇವಾಲಯಗಳಲ್ಲಿನ ಕಾಣಿಕೆ ಹುಂಡಿಗಳಿಗೆ ಕನ್ನ ಹಾಕಿ, ಬಂದ ಹಣದಿಂದ ಗರ್ಲ್‌ಫ್ರೆಂಡ್ಸ್ ಜೊತೆ ಮೋಜು-ಮಸ್ತಿ ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಮೂಲಕ ಸರಣಿ ಹುಂಡಿ ಕಳವು ಪ್ರಕರಣಗಳ ಹಿಂದಿನ ಪ್ರಮುಖ ಆರೋಪಿ ಸಿಕ್ಕಿಬಿದ್ದಂತಾಗಿದೆ.
ತುಮಕೂರು ಜಿಲ್ಲೆ ಶಿರಾ ಮೂಲದ ತಿಪ್ಪೇಶ್ (32) ಬಂಧಿತ, ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಮೊಬೈಲ್ಫೋನ್ಗಳನ್ನು ಜಪ್ತಿ ಮಾಡಿರುವ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
ಗಾರೆ ಕೆಲಸ ಮಾಡುತ್ತಿದ್ದ ತಿಪ್ಪೇಶ್‌ಗೆ ಹಲವು ಹೆಂಗಸರ ಸಹವಾಸವಿದ್ದು, ವಿವಿಧ ಜಿಲ್ಲೆಗಳಲ್ಲಿ ಈತನಿಗೆ ಗೆಳತಿಯರಿದ್ದಾರೆ ಎನ್ನಲಾಗಿದೆ, ಸುಲಭವಾಗಿ ಹಣ ಗಳಿಸಿ ಗೆಳತಿಯರೊಂದಿಗೆ ಮೋಜುಮಸ್ತಿ ಮಾಡಲು ಕಳ್ಳತನದ ದಾರಿ ಹಿಡಿದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದು ತಾಲೂಕು ಹಾಗೂ ಜಿಲ್ಲೆಯಲ್ಲಿ ನಡೆದ ಕಾಣಿಕೆ ಹುಂಡಿ ಕಳವು ಹಾಗೂ ದ್ವಿಚಕ್ರವಾಹನಗಳ ಕಳವು ಪ್ರಕರಣಗಳ ಬಗ್ಗೆ ಮತ್ತಷ್ಟು ಮಾಹಿತಿ ಹೊರಬರಲಿದೆ.
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ಚಿಕ್ಕಹೆಜ್ಜಾಜಿಯಲ್ಲಿ ಇತ್ತೀಚಿಗೆ ನಡೆದಿದ್ದ ಕಾಣಿಕೆ ಹುಂಡಿ ಕಳವು ಪ್ರಕರಣದಲ್ಲಿ ತಿಪ್ಪೇಶ್ ಹಾಗೂ ಸಹಚರರು ಭಾಗಿಯಾಗಿದ್ದರು. ಪ್ರಕರಣ ಬೆಂಬತ್ತಿದ್ದ ಪೊಲೀಸರಿಗೆ ಕೆಲವರ ಮೇಲೆ ಅನುಮಾನ ಮೂಡಿತ್ತು. ಇದೇ ವೇಳೆ ಶಿರಾ ಮೂಲದ ತಂಡವೊಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ನಗರಠಾಣೆ ಪೊಲೀಸರು ನಗರದ ರೈಲ್ವೇ ಸ್ಟೇಷನ್ ಬಳಿ ತಿಪ್ಪೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬಾಯ್ಬಿಟ್ಟಿದ್ದಾನೆ.
ನಗರದ ಶ್ರೀ ವೆಂಕರಮಣಸ್ವಾಮಿ ರಥೋತ್ಸವದ ವೇಳೆ ದ್ವಿಚಕ್ರ ವಾಹನ ಕಳವು ಪ್ರಕರಣ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಹೆಜ್ಜಾಜಿ ದೇವಾಲಯದಲ್ಲಿನ ಹುಂಡಿ ಕಾಣಿಕೆ ಕಳವು ಸೇರಿ ಮತ್ತಿತರ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಆರೋಪಿ ತಿಪ್ಪೇಶ್ ಹಾಗೂ ಇನ್ನಿಬ್ಬರು ಸಹಚರರು ಜಾತ್ರೆ, ಉತ್ಸವಗಳಲ್ಲಿ ದ್ವಿಚಕ್ರವಾಹನಗಳನ್ನು ಕದ್ದು ದೇಗುಲಗಳ ಕಳ್ಳತನ ಕೃತ್ಯಕ್ಕೆ ಬಳಸುತ್ತಿದ್ದರು. ಜಾತ್ರೆ, ಉತ್ಸವದ ಸಮಯದಲ್ಲಿ ಕಾಣಿಕೆ ಹುಂಡಿಗಳಲ್ಲಿ ಸಂಗ್ರಹವಾಗುವ ಹಣದ ಮೇಲೆ ಕಣ್ಣು ಹಾಕುತ್ತಿದ್ದ ಖದೀಮರು, ಹೆಚ್ಚಿನ ಕಾಣಿಕೆ ಹಣ ಸಂಗ್ರಹವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ರಾತ್ರಿ ವೇಳೆ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ
ಅಂತರ್ಜಿಲ್ಲಾ ಕಳ್ಳರು: ದೊಡ್ಡಬಳ್ಳಾಪುರ ತಾಲೂಕು ಮಾತ್ರವಲ್ಲದೇ ತುಮಕೂರು ಜಿಲ್ಲೆಯ ಕೊರಟಗೆರೆ ಸೇರಿ ಇನ್ನಿತರ ಜಿಲ್ಲೆಗಳಲ್ಲೂ ದೇವಾಲಯದ ಹುಂಡಿ ಕಳ್ಳತನ ಮತ್ತು ದ್ವಿಚಕ್ರ ವಾಹನಗಳ ಕಳ್ಳತನ ಕೃತ್ಯಗಳಲ್ಲಿ ತಿಪ್ಪೇಶ್ ಮತ್ತು ತಂಡ ಭಾಗಿಯಾಗಿತ್ತು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.