12 ವರ್ಷಗಳ ಬಳಿಕ ಕುಟುಂಬ ಸೇರಿದ ಮಾನಸಿಕ ಅಸ್ವಸ್ಥ

24NGD1
Published on

ನಂಜನಗೂಡು: ಮಾನಸಿಕ ಅಸ್ವಸ್ಥನನ್ನು 12 ವರ್ಷಗಳ ಕಾಲ ಸುದೀರ್ಘ ಆರೈಕೆ ಮಾಡಿ ಆತನನ್ನು ಮರಳಿ ಕುಟುಂಬಕ್ಕೆ ಸೇರಿಸುವ ಮೂಲಕ ತಾಲೂಕಿನ ಸಿಂಧುವಳ್ಳಿ ಬಳಿಯಿರುವ ಕರುಣಾಲಯ ಆಸ್ಪತ್ರೆಯ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.


ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಮುಲ್ಲಂ ಪಟ್ಟಣದ ನಿವಾಸಿ ಕೃಷ್ಣಪ್ಪ (62) ಮರಳಿ ತಮ್ಮ ಕುಟುಂಬ ಸೇರಿದವರು. 2012ರಲ್ಲಿ ಕೃಷ್ಣಪ್ಪ ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. 2012ರ ಜೂನ್ 10ರಂದು ನಂಜನಗೂಡಿನಲ್ಲಿ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕರುಣಾಲಯ ಆಸ್ಪತ್ರೆ ಸಮೀಪ ಬಿದ್ದಿದ್ದ ಕೃಷ್ಣಪ್ಪ ಅವರನ್ನು ಕರುಣಾಲಯ ಸಿಬ್ಬಂದಿ ಆಸ್ಪತ್ರೆಗೆ ಕರೆತಂದು ಆರೈಕೆ ಮಾಡಿದ್ದರು.


ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಸುದೀರ್ಘ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರು. ನಾಲ್ಕು ವರ್ಷದಿಂದ ತನ್ನ ಕುಟುಂಬದ ಸದಸ್ಯರನ್ನು ಸೇರಲು ಹಾತೊರೆಯುತ್ತಿದ್ದರೂ ವಿಳಾಸ, ದೂರವಾಣಿ ನೆನಪಿರಲಿಲ್ಲ. ಈ ನಡುವೆ ಕೃಷ್ಣಪ್ಪ ಹೇಳುತ್ತಿದ್ದ ತಿರುಪತಿ ಸಮೀಪದ ಊರುಗಳನ್ನು ಹುಡುಕಾಟ ನಡೆಸಿದ ಕರುಣಾಲಯ ಸಿಬ್ಬಂದಿ ಕೊನೆಗೂ ಆತನ ಮನೆಯವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


ಕೃಷ್ಣಪ್ಪ ಸಹೋದರ ಮನೋಹರ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಜ.22ರಂದು ಕರುಣಾಲಯಕ್ಕೆ ಆಗಮಿಸಿ ಅಣ್ಣನನ್ನು ಕಂಡು ಭಾವುಕರಾಗಿದ್ದಾರೆ. 12 ವರ್ಷಗಳ ಹಿಂದೆ ತಪ್ಪಿಸಿಕೊಂಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದೆವು. ಈಗ ಕುಟುಂಬದವರನ್ನು ಸೇರಿರುವುದು ಸಂತಸ ತಂದಿದೆ ಎಂದಿದ್ದಾರೆ. ಕರುಣಾಲಯ ಸಿಬ್ಬಂದಿ ಕೃಷ್ಣಪ್ಪ ಅವರನ್ನು ಕುಟುಂದದವರೊಂದಿಗೆ ಊರಿಗೆ ಬೀಳ್ಕೊಟ್ಟಿದ್ದಾರೆ.


ವಿಳಾಸ ಸಿಕ್ಕಿದ್ದು ಹೇಗೆ?:
ತಿರುಪತಿ ಸಮೀಪ ಎಂದು ಹೇಳುತ್ತಿದ್ದ ಕೃಷ್ಣಪ್ಪಗೆ ತಮ್ಮ ಹುಟ್ಟೂರಿನ ನೆನಪು ಇರಲಿಲ್ಲ. ಅವರನ್ನು ಕುಟುಂಬದವರೊಂದಿಗೆ ಸೇರಿಸಬೇಕೆಂಬ ಹಂಬಲದೊಂದಿಗೆ ಕರುಣಾಲಯ ಸಿಬ್ಬಂದಿ ಶ್ರಮ ಹಾಕಿದ್ದರು. ಸಂಸ್ಥೆಯೊಂದಿಗೆ ಒಡನಾಟ ಇದ್ದ ವ್ಯಕ್ತಿಯೊಬ್ಬರು ತಿರುಪತಿಗೆ ಮದುವೆಯಾಗಿದ್ದು ಅವರನ್ನು ಸಂಪರ್ಕಿಸಿದ್ದಾರೆ. ತಿರುಪತಿಯಲ್ಲಿರುವ ಆ ವ್ಯಕ್ತಿ ಆತನ ಸಮುದಾಯದ ಮಾಹಿತಿ ಕೇಳಿದ್ದಾರೆ. ನಂತರ ಕೃಷ್ಣಪ್ಪ ಫೋಟೋ ಅನ್ನು ಅವರಿಗೆ ಕಳುಹಿಸಿದ್ದಾರೆ. ಕೃಷ್ಣಪ್ಪ ಸಮುದಾಯದವರು ವಾಸಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡಿ ಅವರ ಭಾವಚಿತ್ರವನ್ನು ತೋರಿಸಿದಾಗ ಅವರ ಕುಟುಂಬದವರ ಮೂಲ ಪತ್ತೆಯಾಗಿದೆ.


ಕರುಣಾಲಯ ಮಾನಸಿಕ ಅಸ್ವಸ್ಥ ಅನಾಥರ ಕೇಂದ್ರದಲ್ಲಿ 54 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ವರ್ಷಗಳಿಂದ 7 ರೋಗಿಗಳು ಗುಣಮುಖರಾಗಿ ತಮ್ಮ ಮನೆ ಸೇರಿದ್ದಾರೆ. ಕೃಷ್ಣಪ್ಪ ತನ್ನ ಕುಟುಂಬ ಸೇರಿರುವುದು ಕರುಣಾಲಯ ಸಿಬ್ಬಂದಿಗೆ ಸಂತಸ ತಂದಿದೆ ಎಂದು ಮುಖ್ಯಸ್ಥೆ ಸಿಸ್ಟರ್ ಸೂಸೈ ಮೇರಿ ಹಾಗೂ ಸ್ಪಂದನಾ ಸಂಸ್ಥೆ ಮುಖ್ಯಸ್ಥೆ ಸಿಸ್ಟರ್ ಮೇಬಲ್ ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net