

ಹೊಸನಗರ: ಗ್ರಾಮದಲ್ಲಿ ದೂರವಾಣಿ ಸಂಪರ್ಕ ಸಮಸ್ಯೆಯಿದ್ದು ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ವಾರಂಬಳ್ಳಿ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಸಭೆ ನಡೆಸಿದ ಗ್ರಾಮಸ್ಥರು ನಮ್ಮ ಊರಿನಲ್ಲಿ ದೂರವಾಣಿ ಸಂಪರ್ಕ ಸಮಸ್ಯೆ ಇದ್ದು ಕಳೆದ ಏಳೆಂಟು ವರ್ಷಗಳಿಂದ ಸಂಬಂಧಿಸಿದ ಇಲಾಖೆಗೆ ಮನವಿ ನೀಡಿದರೂ ಯಾವುದೆ ಪರಿಣಾಮ ಆಗಿಲ್ಲ. ಅಂತಿಮವಾಗಿ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಕೆ ನೀಡಿದರು.
ಹೊಸನಗರ - ತೀರ್ಥಹಳ್ಳಿ ಮಾರ್ಗದಲ್ಲಿ ಬರುವ ವಾರಂಬಳ್ಳಿ ಗ್ರಾಮದಲ್ಲಿ ದೂರವಾಣಿ ಸಮಸ್ಯೆ ಇದೆ. ದೂರವಾಣಿ ಸಂಪರ್ಕಕ್ಕಾಗಿ ಇಲ್ಲಿನ ಜನರು ಪರಿತಪಿಸಬೇಕಾಗಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ. ಸಂಪರ್ಕ ಸಾಧನಕ್ಕೆ ಗುಡ್ಡಗಾಡು ಪ್ರದೇಶಗಳನ್ನು ಹತ್ತಿ ಹೋಗಬೇಕಾಗಿದೆ. ಇದರಿಂದ ಇಲ್ಲಿನ ಜನರು ಬೇಸತ್ತಿದ್ದಾರೆ. ದೂರವಾಣಿ ಸಂಪರ್ಕ ವ್ಯವಸ್ಥೆ ಪಡೆಯಲು ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡುವುದು ನಮ್ಮ ಅಂತಿಮ ಹೋರಾಟವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಭೆಯಲ್ಲಿ ಗ್ರಾಪಂ ಸದಸ್ಯ ಹುಲಿ ಕೃಷ್ಣಮೂರ್ತಿ, ಹರೀಶ್, ಯೋಗೇಂದ್ರ ಹುಣಸೆಮಕ್ಕಿ, ಮಂಜುನಾಥ, ವಿನಾಯಕ ಪ್ರಭು, ಕಮಲಾಕ್ಷಿ, ನಳಿನಿ, ರಮೇಶ್ ಇತರರಿದ್ದರು.