ಟಿಕ್​ಟಾಕ್​ಅನ್ನು ಮೀರಿಸಿ ಮೊದಲ ಸ್ಥಾನ ಪಡೆದ ಟೆಲಿಗ್ರಾಂ; ಎರಡನೇ ಸ್ಥಾನದಲ್ಲಿ ಸಿಗ್ನಲ್

telegram
Published on

ನವದೆಹಲಿ: 'ವಾಟ್ಸ್​ಆ್ಯಪ್​'ಗೆ ಪ್ರತಿಸ್ಪರ್ಧಿಯಾದ ಮೆಸೇಜಿಂಗ್ ಆ್ಯಪ್ 'ಟೆಲಿಗ್ರಾಂ', ಜನವರಿ ತಿಂಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಡೌನ್ಲೋಡ್​ ಆದ ನಾನ್-ಗೇಮಿಂಗ್ ಆ್ಯಪ್​ ಆಗಿ ಹೊರಹೊಮ್ಮಿದೆ. ಸೆನ್ಸಾರ್ ಟವರ್​ ನೀಡಿರುವ ವರದಿಯ ಪ್ರಕಾರ 2021 ರ ಜನವರಿಯಲ್ಲಿ ಟೆಲಿಗ್ರಾಂ 63 ಮಿಲಿಯನ್ ಇನ್​ಸ್ಟಾಲ್​ಗಳನ್ನು ಕಂಡಿದ್ದು, ಗೂಗಲ್ ಪ್ಲೇ ಸ್ಟೋರ್​ನಲ್ಲಿ ಈವರೆಗೆ 'ಟಿಕ್​ಟಾಕ್'​ ಆ್ಯಪ್​ಗಿದ್ದ ಮೊದಲ ಸ್ಥಾನವನ್ನು ತಾನು ಪಡೆದುಕೊಂಡಿದೆ.

2020ರ ಡಿಸೆಂಬರ್ ತಿಂಗಳಲ್ಲಿ 9 ನೇ ಸ್ಥಾನದಲ್ಲಿದ್ದ ಟೆಲಿಗ್ರಾಂ ಜನವರಿ ತಿಂಗಳಲ್ಲಿ ದಿಢೀರನೇ ಮೊದಲ ಸ್ಥಾನಕ್ಕೇರಿದೆ. ಮತ್ತು ಒಟ್ಟು ಡೌನ್ಲೋಡ್​ ಸಂಖ್ಯೆಯಲ್ಲಿ ಶೇ.24 ರಷ್ಟು ಭಾರತೀಯ ಬಳಕೆದಾರರದ್ದೇ ಆಗಿದೆ. ಹೀಗಾಗಿ ವಾಟ್ಸ್​ಆ್ಯಪ್​ನ ಹೊಸ ಪ್ರೈವೆಸಿ ಪಾಲಿಸಿಯ ಹಿನ್ನೆಲೆಯಲ್ಲಿ ಭಾರತೀಯ ಬಳಕೆದಾರರು ಪರ್ಯಾಯ ಮೆಸೇಂಜಿಂಗ್ ಆ್ಯಪ್​ಗಳಿಗಾಗಿ ಹುಡುಕಾಡಿದ್ದು, ಟೆಲಿಗ್ರಾಂನ ಈ ಸಾಧನೆಗೆ ಇಂಬು ನೀಡಿರುವುದು ಸ್ಪಷ್ಟವಾಗಿದೆ.

2020 ರ ಜನವರಿಯಲ್ಲಿನ ಅಂಕಿಅಂಶಗಳಿಗೆ ಹೋಲಿಸಿದರೆ ಟೆಲಿಗ್ರಾಂನ ಈ ಬಾರಿಯ ಡೌನ್ಲೋಡ್​ ಗತಿಯು ನಾಲ್ಕು ಪಟ್ಟು ಹೆಚ್ಚಾಗಿದೆ. ಪ್ಲೇ ಸ್ಟೋರ್​​ನಲ್ಲಿ ಮೊದಲ ಸ್ಥಾನ ಗಳಿಸಿದರೆ, ಆ್ಯಪಲ್​ನ ಆ್ಯಪ್ ಸ್ಟೋರ್​ನಲ್ಲಿ ನಾಲ್ಕನೇ ಸ್ಥಾನವನ್ನು ಟೆಲಿಗ್ರಾಂ ಗಳಿಸಿದೆ. ಆದರೆ ಐಒಎಸ್ ಡಿವೈಸ್​ಗಳಲ್ಲಿ ಟಿಕ್​ಟಾಕ್ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದು, ಯೂಟ್ಯೂಬ್ ಮತ್ತು ಜೂಮ್​ ಅದರ ಹಿಂದಿವೆ.

ಮತ್ತೊಂದು ಮೆಸೇಜಿಂಗ್ ಆ್ಯಪ್​ ಆದ ಸಿಗ್ನಲ್ ಕೂಡ ಡೌನ್ಲೋಡ್ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಗೂಗಲ್ ಪ್ಲೇ ಸ್ಟೋರ್​ನಲ್ಲಿ ಎರಡನೇ ಅತಿ ಹೆಚ್ಚು ಡೌನ್ಲೋಡ್​ ಗಳನ್ನು ಕಂಡ ಆ್ಯಪ್ ಆಗಿ ಸಿಗ್ನಲ್​ ಹೊರಹೊಮ್ಮಿದೆ. ಮತ್ತೆ ಒಟ್ಟಾರೆಯಾಗಿ ಮೂರನೇ ಸ್ಥಾನ ಗಳಿಸಿದ್ದು, ಆ್ಯಪಲ್ ಆ್ಯಪ್ ಸ್ಟೋರ್​ನಲ್ಲಿ 10 ನೇ ಸ್ಥಾನ ಪಡೆದು ಟಾಪ್ ಟೆನ್ ಸೇರಿದೆ.

ಭಾರತದಲ್ಲಿ ವೀಡಿಯೋ ಶೇರಿಂಗ್ ಆ್ಯಪ್ ಟಿಕ್​ಟಾಕ್​ ನಿಷೇಧವಾಗಿರುವ ಹಿನ್ನೆಲೆಯಲ್ಲಿ ಅದೇ ತೆರನ ಮೇಡ್ ಇನ್ ಇಂಡಿಯಾ ಆ್ಯಪ್ ಆದ ಮೋಜ್​ ಗೆ ಪ್ಲೇ ಸ್ಟೋರ್ ನಲ್ಲಿ 8 ನೇ ಸ್ಥಾನ ದೊರಕಿದೆ. ಮೋಜ್​, ಈವರೆಗೆ 100 ಮಿಲಿಯನ್ ಡೌನ್ಲೋಡ್​ಗಳನ್ನು ಕಂಡಿದೆ. ತನ್ನ ನಿಯಮಗಳ ಬಗೆಗಿನ ವಿವಾದಗಳ ನಡುವೆಯೂ ವಾಟ್ಸಾಪ್ ಒಟ್ಟಾರೆ 5ನೇ ಸ್ಥಾನದಲ್ಲಿ ಮುಂದುವರೆದಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net