ಶಿಕ್ಷಕ ಸೇವೆ ಸಾರ್ಥಕ| ಟೆಲಿಗ್ರಾಂ ಗ್ರೂಪ್ ರಚನೆ

T 5
Published on

ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.

ಟೆಲಿಗ್ರಾಂ ಗ್ರೂಪ್ ರಚನೆ

ಈಗ ಎದುರಾಗಿರುವ ಸವಾಲು ವಿಭಿನ್ನವಾದದ್ದು. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ತೊಂದರೆ ಆಗದಂತೆ, ಕಲಿಕೆ ನಿಲ್ಲದಂತೆ ನೋಡಿಕೊಳ್ಳುವುದು ಜವಾಬ್ದಾರಿ ಆಗಿತ್ತು. ಆದರೆ ಯಾವುದೇ ವಿಡಿಯೋ ಅಥವಾ ಮಾಹಿತಿ ಮೊಬೈಲ್​ಫೋನ್​ಗಳಲ್ಲಿ ಹುಡುಕಿದರೂ ಅದು ಇಂಗ್ಲಿಷ್​ನಲ್ಲಿ ಸಿಗುತ್ತಿದ್ದುದರಿಂದ ಆ ವಿಚಾರ ಅರ್ಥ ಮಾಡಿಕೊಳ್ಳುವುದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕಷ್ಟವಾಗಿತ್ತು. ಈ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ನನ್ನ ಶಿಕ್ಷಕ ಮಿತ್ರರಾದ ಸದ್ಗುರು ಭಟ್, ಗಣೇಶ ಹೆಗಡೆ, ಶಿವಪ್ರಸಾದ್ ಹಾಗೂ ನಾರಾಯಣ ಶೇರುಗಾರ್ ಜತೆಗೂಡಿ ‘ಸಶಾಮ’ ಎಂಬ ಟೆಲಿಗ್ರಾಂ ಗ್ರೂಪ್ ಮಾಡಿದೆವು. 6 ರಿಂದ 8ನೇ ತರಗತಿಗಳ ಗಣಿತ, ವಿಜ್ಞಾನ, ಕನ್ನಡ ವಿಷಯಗಳ ವಿಡಿಯೋಗಳನ್ನು ಯೂಟ್ಯೂಬ್ ಲಿಂಕ್ ಮೂಲಕ ಕಳಿಸುತ್ತಿದ್ದೇವೆ. ಇಲ್ಲಿನ ವಿಡಿಯೋಗಳು ಸಂಪೂರ್ಣ ಕನ್ನಡದಲ್ಲಿದ್ದು, ಪಠ್ಯಕ್ರಮಕ್ಕನುಗುಣವಾಗಿ ಪಾಠಗಳನ್ನು 5-10 ನಿಮಿಷಗಳ 4-5 ತುಣುಕುಗಳಾಗಿ ಮಾಡಿ ಕಳಿಸಲಾಗುತ್ತದೆ. ಪ್ರತಿ ಹಂತದಲ್ಲಿ ಮೌಲ್ಯಮಾಪನ ಚಟುವಟಿಕೆಗಳನ್ನೂ ಕೈಗೊಳ್ಳುತ್ತಿದ್ದೇವೆ. ಈಗಾಗಲೆ 1750ಕ್ಕೂ ಹೆಚ್ಚು ಸದಸ್ಯರಿರುವ ಈ ಗ್ರೂಪ್​ನಲ್ಲಿ ಈವರೆಗೆ 65ಕ್ಕೂ ಹೆಚ್ಚು ವಿಡಿಯೋ ಪಾಠಗಳನ್ನು ಕಳಿಸಿದ್ದು, ಹಲವು ಶಿಕ್ಷಕರು ಇವುಗಳನ್ನು ತಮ್ಮ ವಿದ್ಯಾರ್ಥಿಗಳಿಗೂ ಕಳಿಸುತ್ತಿರುತ್ತಾರೆ. ಹೀಗೆ ಕರೊನಾ ಸಂಕಷ್ಟದಲ್ಲೂ ವಿದ್ಯಾರ್ಥಿಗಳಿಗೆ ಅಕ್ಷರದ ಅರಿವು ಮೂಡಿಸುತ್ತಿರುವುದು ಸಮಾಧಾನ ತಂದಿದೆ.

| ಗಣಪತಿ ಹೆಗಡೆ ಶಿಕ್ಷಕ, ತಾರಗೋಡ, ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net