Telangana Rain: ತೆಲಂಗಾಣದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಅಬ್ಬರಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಹವಾಮಾನ ಬದಲಾಗಿದ್ದು, ಹಲವು ಕಡೆ ಮಳೆ ಜೋರಾಗಿದ್ದು, ಇದರಿಂದ ಜನರಲ್ಲಿ ಆತಂಕವೂ ಹೆಚ್ಚಾಗಿದೆ.
ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಬುರ್ಗಂಪಾಡಿನಲ್ಲಿ ಬಿರುಗಾಳಿಯ ರಭಸಕ್ಕೆ ಹಲವು ಮನೆಗಳ ಮೇಲ್ಛಾವಣಿಯ ಶೀಟ್‌ಗಳು ಹಾರಿ ಹೋಗಿವೆ. ಹಲವೆಡೆ ಮರಗಳು ಧರೆಗುರುಳಿದ್ದು, ಅಲ್ಲಿನ ಜನಜೀವನ ಸಂಕಷ್ಟಕ್ಕ ಸಿಲುಕಿದೆ.
ಬುರ್ಗಂಪಾಡಿನಲ್ಲಿ ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಸಿಲುಕಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ರಕ್ಕಸ ಗಾಳಿಯ ರಭಸಕ್ಕೆ ಮನೆಗಳ ಮೇಲ್ಛಾವಣಿ ಶೀಟ್‌ಗಳು ಹಾರಿದ್ದು, ಮರಗಳು ಧರೆಗುರುಳಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತೆಲಂಗಾಣದ ಉತ್ತರ ಮತ್ತು ಪೂರ್ವ ಭಾಗದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕುಮುರಂ ಭೀಮ್ ಆಸಿಫಾಬಾದ್, ಮಂಚಿರ್ಯಾಲ್, ಜಯಶಂಕರ್ ಭೂಪಾಲಪಲ್ಲಿ, ಮುಳುಗು ಹಾಗೂ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇತ್ತ ಹೈದರಾಬಾದ್‌ನಲ್ಲೂ ಮೋಡ ಕವಿದ ವಾತಾವರಣ ಮುಂದುವರಿದಿದೆ. ನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.(ಏಜೆನ್ಸಿಸ್)