

ನವದೆಹಲಿ: ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಸದ್ಯ ಪೊಲೀಸರ ಅತಿಥಿಯಾಗಿರುವ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಥಿಯೇಟರ್ನಲ್ಲಿ ತನ್ನನ್ನು ಕಣ್ತುಂಬಿಕೊಳ್ಳಲು ನೂಕುನುಗ್ಗಲಿನ ಮಧ್ಯೆಯೇ ಬಂದ ಮಹಿಳಾ ಅಭಿಮಾನಿ ರೇವತಿ ಮತ್ತು ಆಕೆಯ ಪುತ್ರನ ಸಾವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಈ ಕೇಸ್ನಡಿ ಅರೆಸ್ಟ್ ಆಗಿ, ನಂತರ ಅದೇ ದಿನ ಜಾಮೀನು ಪಡೆದಿದ್ದ ಅಲ್ಲು ಅರ್ಜುನ್ರನ್ನು ಇಂದು ಹೈದರಾಬಾದ್ನ ಚಿಕ್ಕಡಪಲ್ಲಿ ಪೊಲೀಸರು ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಸದ್ಯ ಅಲ್ಲು ಅರ್ಜುನ್ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ನಟ ಹಾಗೂ ಚಿತ್ರತಂಡದ ವಿರುದ್ಧ ಆರೋಪಗಳು ವ್ಯಕ್ತವಾಗುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಮತ್ತು ಅವರ ಚಿತ್ರವನ್ನು ಟೀಕಿಸಿ ಮಾತನಾಡಿರುವ ತೆಲಂಗಾಣ ಸಚಿವೆ ದಾನಸರಿ ಅನಸೂಯಾ ಸೀತಕ್ಕ, ‘ಜೈ ಭೀಮ್’ ನಂತಹ ಸಾಮಾಜಿಕ ಮಹತ್ವದ ಸಿನಿಮಾಗಳ ಬದಲು ಅಪರಾಧಿಗಳನ್ನು ಹೀರೋ ಆಗಿ ಬಿಂಬಿಸುವ ಚಿತ್ರಗಳಿಗೆ ಹೆಚ್ಚು ಮನ್ನಣೆ ನೀಡುತ್ತಿರುವುದು ಸರಿಯಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇಂದು ಮುಳುಗು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೀತಕ್ಕ, ಕಳ್ಳಸಾಗಾಣಿಕೆದಾರರನ್ನು ವೈಭವೀಕರಿಸುವ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ತಮಿಳು ನಟ ಸೂರ್ಯ ಅಭಿನಯದ 'ಜೈ ಭೀಮ್'ನಂತಹ ಸಾಮಾಜಿಕ ಪರಿಣಾಮ ಬೀರುವ ಹಾಗೂ ವಿಮರ್ಶಕರ ಮೆಚ್ಚುಗೆ ಪಡೆದ ಸಿನಿಮಾಗಳು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿಲ್ಲ. ಆದರೆ, ಕಳ್ಳಸಾಗಾಣಿಕೆದಾರರ ಹೀರೋಯಿಸಂ ಮಾತ್ರ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರೋಪಿಗಳನ್ನು ಹೀರೋ ಆಗಿ ತೋರಿಸುವ ಸಿನಿಮಾಗಳಿಗೇಕೆ ಇಷ್ಟೊಂದು ಮನ್ನಣೆ?" ಎಂದು ಪ್ರಶ್ನಿಸಿದ್ದಾರೆ.
"ಇಂತಹ ಚಿತ್ರಗಳು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಬಹುದು ಮತ್ತು ಬಹುಶಃ ಅಪರಾಧ ನಡವಳಿಕೆಯನ್ನು ಪ್ರೋತ್ಸಾಹಿಸಬಹುದು. ಬಲವಾದ ಸಾಮಾಜಿಕ ಮೌಲ್ಯಗಳು ಮತ್ತು ಅರ್ಥಪೂರ್ಣ ಸಂದೇಶಗಳನ್ನು ಹೊಂದಿರುವ ಚಲನಚಿತ್ರಗಳ ಅಗತ್ಯತೆ ಹೆಚ್ಚಿದೆ. ತಮ್ಮ ಕೆಲಸದ ಮೂಲಕ ಸಮಾಜವನ್ನು ಧನಾತ್ಮಕ ಬದಲಾವಣೆಯತ್ತ ಮಾರ್ಗದರ್ಶನ ಮಾಡುವಲ್ಲಿ ಚಿತ್ರ ನಿರ್ಮಾಪಕರ ಪಾತ್ರ ಬಹಳ ಮುಖ್ಯವಾಗಿದೆ" ಎಂದಿದ್ದಾರೆ,(ಏಜೆನ್ಸೀಸ್).