ತೆಲಂಗಾಣದಲ್ಲಿ ಕೆಸಿಆರ್​ಗೆ ಆಘಾತ: ಬಿಆರ್​ಎಸ್ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್, ಕಾಂಗ್ರೆಸ್ ಕೈ ಹಿಡಿದ ಮತದಾರರು

Telangana Result
Published on

ಹೈದರಾಬಾದ್: ತೆಲಂಗಾಣ ಮತದಾರರು ಈ ಬಾರಿ ಕಾಂಗ್ರೆಸ್​ನ ಕೈ ಹಿಡಿದಿದ್ದಾರೆ. ಎರಡು ಬಾರಿ ಸತತವಾಗಿ ಅಧಿಕಾರಕ್ಕೆ ಬಂದಿದ್ದ ಬಿಆರ್​ಎಸ್​ಗೆ ಹ್ಯಾಟ್ರಿಕ್ ಗೆಲುವು ಕೈತಪ್ಪಿದೆ. ಈ ಮೂಲಕ ಸಿಎಂ ಕೆ. ಚಂದ್ರಶೇಖರ ರಾವ್​ಗೆ ಭಾರಿ ನಿರಾಸೆಯಾಗಿದೆ.

ಉತ್ತರ ಭಾರತದಲ್ಲಿ ಬಿಜೆಪಿ ತನ್ನ ಬಲವನ್ನು ಮತ್ತೊಮ್ಮೆ ಪ್ರದರ್ಶಿಸಿದೆಯಾದರೂ ದಕ್ಷಿಣದಲ್ಲಿ ಅದರ ಸಾಧನೆ ಬಹಳ ನೀರಸವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮೊದಲಾದ ಘಟಾನುಘಟಿ ನಾಯಕರು ಹಲವು ಸುತ್ತಿನ ಅಬ್ಬರದ ಪ್ರಚಾರದಲ್ಲಿ ಭಾಗವಹಿಸಿದ್ದರೂ ತೆಲಂಗಾಣದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ವಿಫಲವಾಗಿದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್) ಸೋಲುಂಡಿದ್ದು ಮಾತ್ರವಲ್ಲದೆ ಸಿಎಂ ಕೆಸಿಆರ್ ವೈಯಕ್ತಿಕವಾಗಿಯೂ ಆಘಾತವನ್ನು ಅನುಭವಿಸಿದ್ದಾರೆ. ಕಾಂಗ್ರೆಸ್ 64 ಸ್ಥಾನಗಳನ್ನು ಪಡೆದಿದೆ. ಸರಳ ಬಹುಮತಕ್ಕೆ 60 ಸ್ಥಾನಗಳು ಬೇಕು. ಬಿಆರ್​ಎಸ್ 39ರಲ್ಲಿ ಜಯಶಾಲಿಯಾಗಿದೆ. ಬಿಜೆಪಿ ಎಂಟು ಕ್ಷೇತ್ರಗಳಲ್ಲಿ ಜಯಿಸಿದೆ. ಎಐಎಂಐಎಂ ಮೂರು ಸ್ಥಾನಗಳಲ್ಲಿ ಗೆದ್ದಿದೆ.

ರಾಹುಲ್ ಶ್ರಮಕ್ಕೆ ಫಲ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದಲ್ಲಿ ನಡೆಸಿದ ಶಕ್ತಿಯುತ ಪ್ರಚಾರ ತೆಲಂಗಾಣದಲ್ಲಿ ಪಕ್ಷದ ಗೆಲುವಿಗೆ ಕಾರಣ. ಬಿಆರ್​ಎಸ್ ಪಕ್ಷದ ಭ್ರಷ್ಟಾಚಾರ ಮತ್ತು ಜನರಿಂದ ಅದು ಸರಿದಿದ್ದು ಕೂಡ ದೇಶದ ಅತ್ಯಂತ ಹಳೆಯ ಪಕ್ಷದ ಗೆಲುವಿಗೆ ಕೊಡುಗೆ ನೀಡಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಎನ್. ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ. ರಾಹುಲ್​ರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಭಾರಿ ಯಶಸ್ಸು ಪಡೆದಿದ್ದು ಅವರು ನಡೆಸಿದ ಪ್ರಚಾರ ಪಕ್ಷಕ್ಕೆ ದೊಡ್ಡ ರೀತಿಯಲ್ಲಿ ನೆರವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಮರೆಡ್ಡಿಯಲ್ಲಿ ಕೆಸಿಆರ್ ಸೋಲು

10 ವರ್ಷದಿಂದ ಅಧಿಕಾರದಲ್ಲಿದ್ದ ಸಿಎಂ ಚಂದ್ರಶೇಖರ ರಾವ್ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿದ್ದರು. ಮೂಲ ಕ್ಷೇತ್ರ ಗಜೆವಾಲ್ ಅಲ್ಲದೆ ಕಾಮರೆಡ್ಡಿ ಕ್ಷೇತ್ರದಿಂದಲೂ ಅದೃಷ್ಟ ಪರೀಕ್ಷೆಗಿಳಿದಿದ್ದು ಮೊದಮೊದಲು ಎರಡೂ ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ, ಗಜೆವಾಲ್​ನಲ್ಲಿ ಬಿಜೆಪಿಯ ಏಟಾಲಾ ರಾಜೇಂದ್ರ ವಿರುದ್ಧ 14,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಕಾಮರೆಡ್ಡಿಯಲ್ಲಿ ಸೋತಿದ್ದಾರೆ.

ಏಕ ಹಂತದ ಚುನಾವಣೆ

ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗೆ ನವೆಂಬರ್ 30ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಶೇಕಡ 71.34 ಜನರು ತಮ್ಮ ಹಕ್ಕು ಚಲಾಯಿಸಿದ್ದರು.

ಮಾತು ಹೆಚ್ಚು-ಕೆಲಸ ಕಡಿಮೆ

‘ಹೆಚ್ಚು ಮಾತು-ಕಡಿಮೆ ಆಡಳಿತ’ ಆಳುವ ಬಿಆರ್​ಎಸ್ ಸರ್ಕಾರದ ನೀತಿಯಾಗಿತ್ತು. ಅದು ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೊಡುಗೆ ನೀಡಿದೆ ಎಂದು ರೆಡ್ಡಿ ನಿರ್ಗಮಿತ ಸರ್ಕಾರಕ್ಕೆ ಟಾಂಗ್ ನೀಡಿದರು.

ಮನೆ ಮಾಡಿದ ಸಂಭ್ರಮ

ಚುನಾವಣಾ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ಸಾಗುತ್ತಿದ್ದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು. ಪಕ್ಷದ ರಾಜ್ಯ ಕಚೇರಿ ‘ಗಾಂಧಿ ಭವನ’ವಲ್ಲದೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮನೆ ಸಮೀಪವೂ ಕಾರ್ಯಕರ್ತರು ನರ್ತಿಸಿ ಸಿಹಿ ಹಂಚಿ ಖುಷಿಯನ್ನು ಹಂಚಿಕೊಂಡರು. ಕಾರ್ಯಕರ್ತರು ಪಟಾಕಿಗಳನ್ನು ಕೂಡ ಸಿಡಿಸಿ ಸಂಭ್ರಮೋಲ್ಲಾಸದಲ್ಲಿ ಮಿಂದೆದ್ದರು. ‘ಜೈ ಕಾಂಗ್ರೆಸ್’, ‘ರೇವಂತ್ ಅಣ್ಣಾ ಜಿಂದಾಬಾದ್’ ಮುಂತಾದ ಘೋಷಣೆಗಳೂ ಮುಗಿಲು ಮುಟ್ಟಿದವು.

ಡಿಜಿಪಿ ಅಮಾನತು

ಮತ ಎಣಿಕೆ ಮುಕ್ತಾಯಕ್ಕೂ ಮುನ್ನ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿಗೆ ಹೂಗುಚ್ಛ ನೀಡಿದ ಹಿನ್ನಲೆಯಲ್ಲಿ ತೆಲಂಗಾಣ ಡಿಜಿಪಿ ಅಂಜನಿ ಕುಮಾರ್​ರನ್ನು ಅಮಾನತುಗೊಳಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ರೆಡ್ಡಿಯನ್ನು ಭೇಟಿಯಾಗಿ ಹೂಗುಚ್ಛ ನೀಡಿ ಶುಭ ಕೋರಿದ್ದ ಅಂಜನಿ ಕುಮಾರ್ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದರು.

ಕ್ಲಿಕ್ ಆದ ಕರ್ನಾಟಕದ ಗ್ಯಾರಂಟಿ ತಂತ್ರ

ತೆಲಂಗಾಣ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಕರ್ನಾಟಕ ಮಾದರಿಯ ಆರು ಗ್ಯಾರಂಟಿಗಳು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ‘ಬಂಗಾರದ ತೆಲಂಗಾಣ’ ರಚನೆಗೆ ಇದು ನೆರವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ ಹೇಳಿದ್ದರು. ಮಹಾಲಕ್ಷ್ಮಿ, ರೈತ ಭರೋಸಾ, ಗೃಹ ಜ್ಯೋತಿ, ಇಂದಿರಮ್ಮ ಇಂಡ್ಲು, ಯುವ ವಿಕಾಸಂ ಮತ್ತು ಚೇಯುತ ಎಂಬ ಆರು ಗ್ಯಾರಂಟಿಗಳ ಆಶ್ವಾಸನೆಯನ್ನು ಕಾಂಗ್ರೆಸ್ ನೀಡಿತ್ತು. ಇದೇ ವರ್ಷ ಮೇ ತಿಂಗಳಲ್ಲಿ ನಡೆದ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ನೀಡಿ ಮತದಾರರಿಗೆ ಬಲೆ ಬೀಸುವುದರಲ್ಲಿ ಯಶಸ್ವಿಯಾಗಿತ್ತು. ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಈ ಯೋಜನೆಗಳ ಕುರಿತು ಅಲ್ಲಿನ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರ ಜಾಹೀರಾತುಗಳನ್ನು ಪ್ರಕಟಿಸಿದ್ದು ವಿವಾದಕ್ಕೆ ಕಾರಣವಾಗಿದ್ದು ಚುನಾವಣೆ ಆಯೋಗ ಕೂಡ ತರಾಟೆಗೆ ತೆಗೆದುಕೊಂಡಿತ್ತು.

ಮುಸ್ಲಿಂ ಮತ ಒಗ್ಗೂಡಿಸುವಲ್ಲಿ ಜಮೀರ್ ಯಶಸ್ವಿ

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಕರ್ನಾಟಕ ರಾಜ್ಯ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್​ಖಾನ್ ಯಶಸ್ವಿಯಾಗಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಇಪ್ಪತೆôದು ದಿನಗಳ ಹಿಂದೆಯೇ ಹೈದರಾಬಾದ್​ಗೆ ಬಂದು ವಾಸ್ತವ್ಯ ಹೂಡಿದ್ದ ಅವರು ಪಕ್ಷದ ನಾಯಕರು, ಸಮುದಾಯದ ಮುಖಂಡರು, ಬುದ್ಧಿಜೀವಿಗಳ ಜತೆ ಹಲವಾರು ಸಭೆಗಳನ್ನು ನಡೆಸಿ ಸಮುದಾಯದ ಪ್ರಾಬಲ್ಯ ಇರುವ 49 ಕ್ಷೇತ್ರಗಳಲ್ಲಿ ಸತತ ಪ್ರವಾಸದ ಮೂಲಕ ಕಾಂಗ್ರೆಸ್ ಪರ ಮತ ಒಗ್ಗೂಡಿಸುವಿಕೆಯಲ್ಲಿ ಸಫಲರಾಗಿದ್ದಾರೆ. ಹೈದರಾಬಾದ್​ಗೆ ಬರುವ ಮುನ್ನ ದೆಹಲಿಗೆ ತೆರಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಜತೆ ಕಾರ್ಯತಂತ್ರಗಳ ಬಗ್ಗೆ ರ್ಚಚಿಸಿದ್ದರು. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಜತೆಯೂ ನಿರಂತರ ಸಂಪರ್ಕದಲ್ಲಿದ್ದು, ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಕಾಂಗ್ರೆಸ್​ನತ್ತ ಒಗ್ಗೂಡಿಸಿದರು.

ಅಷ್ಟೇ ಅಲ್ಲದೆ ಎಂಐಎಂ ಹಾಗೂ ಬಿಆರ್​ಎಸ್ ನಾಯಕರನ್ನೂ ಕಾಂಗ್ರೆಸ್​ಗೆ ಸೆಳೆದರು. ಬೋಧಾನ್, ರಾಮಗೊಂಡಮ್ ಪೆದ್ದಪಲ್ಲೆ, ಬಾಲಕೊಂಡ್, ಕೊಂಡಗಲ್ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವುದರ ಜತೆಗೆ ಕಮ್ಮಮ್ ವಾರಂಗಲ್, ನಲ್ಗೊಂಡ ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಮುಸ್ಲಿಂ ಮತ ಒಗ್ಗೂಡಿಸಿದ್ದು ಕಾರಣವಾಗಿದೆ. ಗೆದ್ದಿರುವ ಕ್ಷೇತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳು ಕಮ್ಮಮ್ ನಲ್ಗೊಂಡ, ವಾರಂಗಲ್ ಜಿಲ್ಲೆಗಳಿಗೆ ಸೇರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net