More

    ಸಿಎಂ ಕೆಸಿಆರ್​, ಸಂಭಾವ್ಯ ಸಿಎಂ ರೇವಂತ್​ ರೆಡ್ಡಿಗೆ ಸೋಲುಣಿಸಿ ಎಲ್ಲರ ಹುಬ್ಬೇರಿಸಿದ ಬಿಜೆಪಿ ಅಭ್ಯರ್ಥಿ!

    ಹೈದರಾಬಾದ್​: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬಿಜೆಪಿ, ತೆಲಂಗಾಣದಲ್ಲಿ ಸೋಲುಂಡರೂ ಸಹ ತನ್ನ ಖ್ಯಾತಿಯನ್ನು ಹೆಚ್ಚಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ. 2018ಕ್ಕೆ ಹೋಲಿಸಿದರೆ ತೆಲಂಗಾಣದಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಏರಿಕೆಯಾಗಿದ್ದು, 8 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಈ ಸಂದರ್ಭದಲ್ಲಿ ಓರ್ವ ಅಭ್ಯರ್ಥಿ ವಿಶೇಷ ಗಮನ ಸೆಳೆದಿದ್ದಾರೆ. ಯಾರು ಅಭ್ಯರ್ಥಿ ಎಂದರೆ, ಕೆ.ವಿ. ರಮಣ ರೆಡ್ಡಿ.

    ಸೈಲೆಂಟಾಗಿಯೇ ಕಾಮರೆಡ್ಡಿ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದ ರಮಣ ರೆಡ್ಡಿ, ತೆಲಂಗಾಣದ ಕಾಂಗ್ರೆಸ್​ ಮುಖ್ಯಸ್ಥ ಮತ್ತು ಸಂಭಾವ್ಯ ಸಿಎಂ ರೇವಂತ್​ ರೆಡ್ಡಿಯನ್ನು ಸೋಲಿಸಿದ್ದಲ್ಲದೆ, ಎರಡು ಬಾರಿ ತೆಲಂಗಾಣವನ್ನು ಆಳಿದ ಸಿಎಂ ಕೆ. ಚಂದ್ರಶೇಖರ್​ ರಾವ್​ ಅವರನ್ನು ಮಣಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

    ಒಟ್ಟು 66,652 ಮತಗಳನ್ನು ಪಡೆದಿರುವ ರಮಣ ರೆಡ್ಡಿ, 6700 ಮತಗಳ ಅಂತರದಿಂದ ಚಂದ್ರಶೇಖರ್​ ರಾವ್​ ಅವರನ್ನು ಮತ್ತು 12,000 ಮತಗಳ ಅಂತರದಿಂದ ರೇವಂತ್​ ರೆಡ್ಡಿಯನ್ನು ಸೋಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಮಣ ರೆಡ್ಡಿ, ಇಬ್ಬರು ಎದುರಾಳಿಗಳನ್ನು ಹಾಲಿ ಸಿಎಂ ಮತ್ತು ಸಂಭಾವ್ಯ ಸಿಎಂ ಎಂದು ಪರಿಗಣಿಸದೆ, ಭಾರತ್​ ರಾಷ್ಟ್ರ ಸಮಿತಿ ಮತ್ತು ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳು ಎಂದು ನೋಡಿದೆ ಎಂದಿದ್ದಾರೆ.

    ನಾನು ಅವರನ್ನು ಸಾಮಾನ್ಯ ಅಭ್ಯರ್ಥಿಗಳಂತೆ ಮತ್ತು ನನ್ನನ್ನು ಬಿಜೆಪಿ ಅಭ್ಯರ್ಥಿಯಾಗಿ ನೋಡಿದ್ದೇನೆ. ನಾನು ಸಾಮಾನ್ಯರ ಬೆಂಬಲದಿಂದ ಗೆದ್ದಿದ್ದೇನೆ. ನನಗೆ ಮತ ಹಾಕಿದ 65 ಸಾವಿರ ಜನರ ಶಾಸಕ ನಾನಲ್ಲ. 2.5 ಲಕ್ಷ ಮತದಾರರು ಮತ್ತು ಕ್ಷೇತ್ರದ 4.5 ಲಕ್ಷ ಜನರ ಶಾಸಕನಾಗಿದ್ದೇನೆ ಎಂದು ರಮಣ ರೆಡ್ಡಿ ಹೇಳಿದರು.

    53 ವರ್ಷದ ರಮಣ ರೆಡ್ಡಿ ಅವರು ಒಮ್ಮೆ ಬಿಆರ್‌ಎಸ್‌ ಪಕ್ಷದಲ್ಲಿದ್ದರು ಮತ್ತು ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದರು. ಕಾಲೇಜು ಶಿಕ್ಷಣವನ್ನು ಹೊಂದಿಲ್ಲದಿದ್ದರೂ ಅವರ ಒಟ್ಟು ಘೋಷಿತ ಆಸ್ತಿ 49.7 ಕೋಟಿ ರೂ. ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ ಹೇಳುತ್ತದೆ. ಕಾಮರೆಡ್ಡಿ ಕ್ಷೇತ್ರ ಹೈದರಾಬಾದ್‌ನಿಂದ ಸುಮಾರು 120 ಕಿ.ಮೀ ದೂರದಲ್ಲಿದೆ. 2014ರಲ್ಲಿ ಆಂಧ್ರಪ್ರದೇಶದಿಂದ ಬೇರ್ಪಟ್ಟು ಸ್ವತಂತ್ರ ರಾಜ್ಯ ರಚನೆಯಾದಾಗಿನಿಂದ ಕಾಮರೆಡ್ಡಿ ಕ್ಷೇತ್ರದಲ್ಲಿ ಬಿಆರ್‌ಎಸ್ ಮೇಲುಗೈ ಸಾಧಿಸಿತ್ತು. ಆದರೆ, ಇದೀಗ ರಮಣ ರೆಡ್ಡಿ ಗೆಲುವು ಅವರ ಸಾಧನೆಯ ಅಗಾಧತೆಯನ್ನು ಹೆಚ್ಚಿಸಿದೆ.

    ಇನ್ನು ಫಲಿತಾಂಶದ ವಿಚಾರಕ್ಕೆ ಬಂದರೆ, ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ. ಚಂದ್ರಶೇಖರ್​ ರಾವ್​ ನೇತೃತ್ವದ ಭಾರತ್​ ರಾಷ್ಟ್ರ ಸಮಿತಿ (ಬಿಆರ್​ಎಸ್​)ಗೆ ತೆಲಂಗಾಣ ಮತದಾರರು ಶಾಕ್​ ನೀಡಿದ್ದು, ಈ ಬಾರಿ ಕಾಂಗ್ರೆಸ್​ ಮೇಲೆ ತಮ್ಮ ಒಲವು ತೋರಿದ್ದಾರೆ. ಅಖಂಡ ಆಂಧ್ರಪ್ರದೇಶದಿಂದ ಇಬ್ಭಾಗವಾಗಿ ಸ್ವತಂತ್ರ ತೆಲಂಗಾಣ ರಾಜ್ಯ ರಚನೆಯಾದಾಗಿನಿಂದ ಕೆ. ಚಂದ್ರಶೇಖರ್​ ರಾವ್​ ಅವರ ಬಿಆರ್​ಎಸ್​ ಪಕ್ಷ ಆಡಳಿತದಕಲ್ಲಿತ್ತು. ಎರಡು ದಶಕಗಳ ಆಡಳಿತಕ್ಕೆ ಈ ಬಾರಿ ಬ್ರೇಕ್​ ಬಿದ್ದಿದೆ.

    ಒಟ್ಟು 119 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್​ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ತೆಲಂಗಾಣದಲ್ಲಿ ಅಧಿಕಾರ ರಚನೆಯತ್ತ ದಾಪುಗಾಲು ಇಟ್ಟಿದೆ. ಆಡಳಿತರೂಢ ಬಿಆರ್​ಎಸ್​ ಕೇವಲ 39 ಸ್ಥಾನಗಳಿಗೆ ಕುಸಿದಿದೆ. ಬಿಜೆಪಿ 8 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಇದೀಗ 8 ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದು, ಈ ಸಂಖ್ಯೆಯು ಚಿಕ್ಕದಾಗಿದೆ ಎನಿಸಿದರೂ ಬಿಜೆಪಿ ಪಾಲಿಗೆ ಇದು ಎಂಟು ಪಟ್ಟು ಹೆಚ್ಚಾಗಿದೆ. (ಏಜೆನ್ಸೀಸ್​)

    ಮತಎಣಿಕೆ ನಡುವೆ ತೆಲಂಗಾಣ ಕಾಂಗ್ರೆಸ್​ ಮುಖ್ಯಸ್ಥರ ಭೇಟಿ: ಡಿಜಿಪಿ ಅಂಜನಿ ಕುಮಾರ್​ ಸಸ್ಪೆಂಡ್​

    ಮೂರು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು: ರಾಹುಲ್​ ಗಾಂಧಿ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts