ಪ್ರೀತಿ ನಿರಾಕರಣೆ; ಹಾಡಹಗಲೇ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಗಲ್ ಪ್ರೇಮಿ

Crime Scene
Published on

ಮುಂಬೈ: ತನ್ನ ಪ್ರೀತಿಯನ್ನು ನಿರಾಕರಿಸಿದ್ದಳೆಂಬ ಕಾರಣಕ್ಕೆ ಯುವಕನೋರ್ವ ಯುವತಿಯನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯಲ್ಲಿ ನಡೆದಿದೆ.

ಅರ್ಚನಾ ಲಕ್ಷ್ಮಣ್​ ಉದಾರ್ (18) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಆರೋಪಿ ತಲೆಮಾರಿಸಿಕೊಂಡಿದ್ದು ಆತನ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ?

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ಯುವತಿಗೆ ತನ್ನನ್ನು ಪ್ರೀತಿಸುವಂತೆ ಬಹಳ ತಿಂಗಳುಗಳಿಂದ ದುಂಬಾಲು ಬಿದ್ದಿದ್ದ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ತನ್ನ ಪೋಷಕರ ಜತೆಗೆ ಯುವತಿಯ ಮನೆಗೆ ತೆರಳಿ ಮದುವೆ ಮಾಡಿಕೊಡುವಂತೆ ಪ್ರಸ್ತಾಪಿಸಿದ್ದ. ಆದರೆ, ಯುವತಿಯ ಮನೆಯವರು ಪ್ರಸ್ತಾಪವನ್ನು ತಿರಸ್ಕರಿಸಿದ್ದರು.

ಇದರಿಂದ ಕುಪಿತಗೊಂಡಿದ್ದ ಆರೋಪಿಯು ಆಕೆ ಕೊಲೆ ಮಾಡಲು ಸಂಚು ರೂಪಿಸಿದ್ದ. ಅದರಂತೆ ಶುಕ್ರವಾರ ಮಧ್ಯಾಹ್ನ 12:30 ಸುಮಾರಿಗೆ ಯುವತಿ ತರಗತಿ ಮುಗಿಸಿಕೊಂಡು ಊಟಕ್ಕೆ ತೆರಳುವ ವೇಳೆ ಅಡ್ಡಗಟ್ಟಿದ್ದ ಆರೋಪಿ ಏಕಾಏಕಿ ಆಕೆಯ ಮೇಲೆ ತನ್ನ ಬಳಿ ಇದ್ದ ಕುಡಗೋಲಿನಿಂದ ಹಲ್ಲೆ ಮಾಡಲು ಶುರು ಮಾಡಿದ್ದಾರೆ. ಯುವತಿ ಸಹಾಯಕ್ಕೆಂದು ಕೂಗಿಕೊಂಡಾಗ ಭಯಗೊಂಡ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಕೂಡಲೇ ಯುವತಿಯ ಸ್ನೇಹಿತರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಗಂಭೀರವಾಗಿ ಗಾಯಗೊಂಡಿದ್ದ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಆರೋಪಿ ತಲೆಮಾರಿಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ಚಾರ್ಜ್​ಶೀಟ್​ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net