

ಲಖನೌ: ಅತ್ಯಾಚಾರ ಪ್ರಕರಣ ಒಂದರಲ್ಲಿ ಜೈಲು ಸೇರಿದ್ದ ಆರೋಪಿಯೋರ್ವ ಜಾಮೀನಿನ ಮೇಲೆ ಹೊರ ಬಂದು ತನ್ನ ಸಹೋದರನೊಂದಿಗೆ ಸೇರಿ ಸಂತ್ರಸ್ತೆಯನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಸಂಬಂಧ ಸಹೋದರರಾದ ಅಶೋಕ್ ಮತ್ತು ಪವನ್ ನಿಶಾದ್ ಪರಾರಿಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ಒಂದನ್ನು ರಚಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಶ್ರೀವಾಸ್ತವ, ಮೃತ ಯುವತಿ ಹಾಗೂ ಆರೋಪಿಗಳಿಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಯುವತಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೂರು ವರ್ಷಗಳ ಹಿಂದೆ ಪವನ್ ನಿಶಾದ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಳು. ಪವನ್ ನಿಶಾದ್ ಹಾಗೂ ಆತನ ಸಹಚರರು ಯುವತಿಯ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರು, ಜತೆಗೆ ದೂರನ್ನು ಹಿಂಪಡೆಯುವಂತೆಯೂ ಕೇಳಿದ್ದರು, ಆದರೆ ಯುವತಿಯ ಪೋಷಕರು ಅದಕ್ಕೆ ಒಪ್ಪಿರಲಿಲ್ಲ.
ಪವನ್ ಸಹೋದರ ಅಶೋಕ್ ನಿಶಾದ್ ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಯುವತಿಯ ಕೊಲೆಗೆ ಎರಡು ದಿನಗಳ ಮೊದಲು ಜೈಲಿನಿಂದ ಬಿಡುಗಡೆಗೊಂಡಿದ್ದ. ಇಬ್ಬರೂ ಮಹಿಳೆಯ ಕುಟುಂಬದವರ ಬಳಿ ಹೋಗಿ ಪ್ರಕರಣ ಮುಚ್ಚಿ ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದರು. ಆದರೆ, ಯುವತಿ ಹಿಂದೆ ಸರಿಯದ ಕಾರಣ ಹೊಲದಲ್ಲಿ ದನ ಮೇಯಿಸಿ ಹಿಂದಿರುಗುತ್ತಿದ್ದ ವೇಳೆ ಸಹೋದರರುರಿಬ್ಬರು ಹೊಂಚು ಹಾಕಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.