ತಂತ್ರಜ್ಞಾನ ಎರಡಲಗಿನ ಕತ್ತಿ

Technology
Published on

ಸ್ಮಾರ್ಟ್​ಫೋನ್ ಮತ್ತು ಸಾಮಾಜಿಕ ಜಾಲತಾಣಗಳಿಂದಾಗಿ ಯುವಜನತೆಯಲ್ಲಿ ಮಾನಸಿಕ ಅಸ್ವಸ್ಥತೆ, ಆತಂಕ-ಖಿನ್ನತೆ ಹೆಚ್ಚಾಗುತ್ತಿದೆ ಎಂದು ಲಂಡನ್​ನ ಕಿಂಗ್ಸ್ ಕಾಲೇಜ್ ನಡೆಸಿದ ಸಂಶೋಧನೆ ತಿಳಿಸಿದೆ. ಅಮೆರಿಕ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಕೈಗೊಂಡ ಅಧ್ಯಯನಗಳೂ ಇದನ್ನು ದೃಢಪಡಿಸಿವೆ. ಈ ಬಗ್ಗೆ ಎಚ್ಚರಿಕೆ ಸಂದೇಶ ನೀಡುವ ವರದಿಗಳು ಕೆಲ ವರ್ಷಗಳಿಂದ ಬರುತ್ತಲೇ ಇವೆ.

ಆಧುನಿಕ ತಂತ್ರಜ್ಞಾನವು ಇತ್ತೀಚಿನ ವರ್ಷಗಳಲ್ಲಂತೂ ಎಲ್ಲರ ಬದುಕಿನಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ಅದನ್ನು ಬಿಟ್ಟು ಬದುಕುವುದಕ್ಕೇ ಸಾಧ್ಯವಿಲ್ಲ ಎನ್ನುವಷ್ಟರಮಟ್ಟಿಗೆ. ಟೆಲಿಫೋನ್, ಟೇಪ್​ರೆಕಾರ್ಡರ್, ಟಿವಿ, ಕಂಪ್ಯೂಟರ್ ಮುಂತಾದವು ಬಂದಾಗಲೇ ಜನರು ಅವುಗಳನ್ನು ಬಿಟ್ಟಿರಲಾಗದಂತೆ ಅಂಟಿಕೊಳ್ಳುವ ‘ಜಾಯಮಾನ’ವನ್ನು ತೋರಿದ್ದರು. ಈ ಶತಮಾನದ ಪ್ರಾರಂಭದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಸ್ಮಾರ್ಟ್​ಫೋನ್​ನಲ್ಲಿ ಆ ಎಲ್ಲ ಉಪಕರಣಗಳ ಅಂಶಗಳೂ ಮಿಳಿತವಾಗಿದ್ದುದರಿಂದ, ಸಹಜವಾಗಿಯೇ ಜನರು ವಿಪರೀತ ಎನ್ನುವಷ್ಟರ ಮಟ್ಟಿಗೆ ‘ಅಡಿಕ್ಟ್’ ಆದರು. ಕರೊನಾ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿ ನಡೆಸುವುದು ಅನಿವಾರ್ಯವಾದಾಗ, ಮಕ್ಕಳ ಕೈಗೂ ಸ್ಮಾರ್ಟ್​ಫೋನ್​ಗಳು ಬಂದವು. ಎಲ್ಲ ಆಧುನಿಕ ಆವಿಷ್ಕಾರಗಳಲ್ಲಿ್ಲ್ದಂತೆ ಅದರಲ್ಲಿ ಕೂಡ ಕೆಟ್ಟದ್ದೂ ಇದೆ, ಒಳ್ಳೆಯದೂ ಇದೆ.

ಹೈಸ್ಪೀಡ್ ಇಂಟರ್​ನೆಟ್, ವೈಫೈ, ಇಂಟರ್ಯಾಕ್ಟಿವ್ ಟಿವಿ, ಕಂಪ್ಯೂಟರ್, ಸ್ಮಾರ್ಟ್​ಫೋನ್ ಮುಂತಾದವುಗಳನ್ನು ಬಳಸಿಯೇ ಶಾಲೆ-ಕಾಲೇಜುಗಳಲ್ಲಿ ಗೂಗಲ್ ಕ್ಲಾಸ್​ರೂಮ್ ಮತ್ತಿತರ ಆಧುನಿಕ ರೀತಿಯ ಬೋಧನಾ ವಿಧಾನಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇದರಿಂದ ಮಕ್ಕಳು ಕಲಿಕೆಯತ್ತ ಆಕರ್ಷಿತರೂ ಆಗುತ್ತಿದ್ದಾರೆ. ಇದಲ್ಲದೇ ಆನ್​ಲೈನ್​ನಲ್ಲಿ ನೋಟ್ಸ್ ಹಂಚಿಕೊಳ್ಳಲು, ವಿಷಯದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು, ಸ್ಟಡಿ ಗ್ರೂಪ್​ಗಳನ್ನು ರಚಿಸಿಕೊಳ್ಳಲು ಈ ಉಪಕರಣಗಳು ಸಹಾಯಕವಾಗಿವೆ. ಆದರೆ, ಇದೇ ವೇಳೆ, ಇನ್​ಸ್ಟಾಗ್ರಾಂ, ಫೇಸ್​ಬುಕ್, ಟ್ವಿಟರ್​ನಂತಹ ವೇದಿಕೆಗಳಲ್ಲಿ ಕಲಿಕೆಗೆ ಮತ್ತು ಪಠ್ಯಕ್ರಮಕ್ಕೆ ಹೊರತಾದ ಹಲವಾರು ವಿಷಯ-ವಸ್ತು-ಗೇಮ್ಳೂ ಸುಲಭವಾಗಿ ಕೈಗೆಟಕುತ್ತಿವೆ. ಇವುಗಳ ಆಕರ್ಷಣೆಯಿಂದಾಗಿ ಕೆಲವು ಮಕ್ಕಳು ಬಹುಪಾಲು ಸಮಯವನ್ನು ಸ್ಮಾರ್ಟ್​ಫೋನ್​ನಲ್ಲೇ ಕಳೆಯತೊಡಗಿದ್ದಾರೆ. ಆಟ-ಊಟ-ಪಾಠದ ಕಡೆ ಗಮನವೇ ಇಲ್ಲದಂತಾಗಿದೆ. ಇದರಿಂದ ಮಾನಸಿಕ-ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ.

ಈಗಾಗಲೇ ಕೆಲವು ಶಾಲಾ-ಕಾಲೇಜುಗಳಲ್ಲಿ ಸ್ಮಾರ್ಟ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಶಾಲೆ-ಕಾಲೇಜಿನ ಹೊರಗೆ ಮತ್ತು ಮನೆಗಳಲ್ಲಿ ಇದರ ಬಳಕೆಗೆ ಕಡಿವಾಣ ಇಲ್ಲ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸರ್ಕಾರದಿಂದ ಆಗಬೇಕಾಗಿದೆ. ಜತೆಗೆ, ಪಾಲಕರು ಕೂಡ ಮೊದಲು ತಾವು ಇದರ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಿಕೊಂಡು, ನಂತರ ತಮ್ಮ ಮಕ್ಕಳಲ್ಲೂ ಇದರ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ಮೂಡಿಸಬೇಕಾಗಿದೆ. ದಿನಕ್ಕೆ ಇಂತಿಷ್ಟು ಗಂಟೆ ಮಾತ್ರ ಸ್ಮಾರ್ಟ್​ಫೋನ್ ಮತ್ತು ಸಾಮಾಜಿಕ ಜಾಲತಾಣ ಬಳಸುತ್ತೇವೆ, ಉಳಿದೆಲ್ಲ ಸಮಯ ಅದರಿಂದ ದೂರವಿದ್ದು, ಆರೋಗ್ಯಕರ ದೈಹಿಕ-ಬೌದ್ಧಿಕ ಚಟುವಟಿಕೆಯಲ್ಲಿ ತೊಡಗಿರುತ್ತೇವೆ ಎಂದು ಪ್ರಜ್ಞಾಪೂರ್ವಕವಾಗಿ ಪಣ ತೊಡಬೇಕಿದೆ. ಇದು ಒಂದು ಪಿಡುಗಾಗಿ ಬೆಳೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಸಾರ್ವಜನಿಕರು ಮತ್ತು ಯುವಜನತೆಯ ಹೊಣೆಗಾರಿಕೆಯಾಗಿದೆ. ಈ ಕೆಲಸವನ್ನು ಮಾಡದಿದ್ದರೆ, ಮುಂದಿನ ಪೀಳಿಗೆಯು ತೀವ್ರತರ ಸಮಸ್ಯೆಗೆ ಸಿಲುಕಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net