ಗರೀಬ್ ಕಲ್ಯಾಣ್ ಹಣಕ್ಕೆ ತಾಂತ್ರಿಕ ದೋಷದ ನೆಪ!

JanDhan
Published on

| ರಾಘವ ಶರ್ಮ ನಿಡ್ಲೆ ನವದೆಹಲಿ

ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ದೇಶದ ಬಡವರ್ಗಕ್ಕೆ ಸಮಸ್ಯೆಯಾಗಬಾರದೆಂದೇ ಪ್ರಧಾನಿ ನರೇಂದ್ರ ಮೋದಿ, ಪಿಎಂ ಗರೀಬ್ ಕಲ್ಯಾಣ್ ಯೋಜನೆ ಪ್ರಕಟಿಸಿದ್ದರು. ಈ ಯೋಜನೆ ಪ್ರಕಾರ ಬಡತನ ರೇಖೆಯಲ್ಲಿ ಬರುವ, ಜನ್​ಧನ್ ಬ್ಯಾಂಕ್ ಖಾತೆಯುಳ್ಳ ಮಹಿಳೆಯರಿಗೆ ಏಪ್ರಿಲ್, ಮೇ ಮತ್ತು ಜೂನ್​ನಲ್ಲಿ ತಲಾ 500 ರೂ. ಹಾಕುವುದಾಗಿ ಕೇಂದ್ರ ಘೋಷಿಸಿತ್ತು. ಆದರೆ, ಕರ್ಣಾಟಕ ಬ್ಯಾಂಕ್​ನಲ್ಲಿ ಜನ್​ಧನ್ ಖಾತೆ ಹೊಂದಿರುವ ಬಿಪಿಎಲ್ ಕಾರ್ಡ ದಾರ ಮಹಿಳೆಯರಿಗೆ ಮೂರು ತಿಂಗಳ ಹಣ ಜಮೆಯಾಗದಿರುವುದು ರಾಜ್ಯದ ಹಲವು ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ.

ಬೇರೆ ಬ್ಯಾಂಕ್​ಗಳ ಜನ್​ಧನ್ ಖಾತೆಗಳಿಗೆ ಹಣ ಬಂದಿದೆ. ಆದರೆ, ಕರ್ಣಾಟಕ ಬ್ಯಾಂಕ್ ಸೇರಿ ಮೂರ್ನಾಲ್ಕು ಬ್ಯಾಂಕ್​ಗಳಿಗೆ ಕೇಂದ್ರದಿಂದ ಹಣ ಸಿಕ್ಕಿಲ್ಲ. ಬಿಜೆಪಿ ಸಂಸದರೇ ಈ ಬಗ್ಗೆ ಕೇಂದ್ರ ಹಣಕಾಸು ಸಚಿವರ ಗಮನಸೆಳೆದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಕ್ಷೇತ್ರದಲ್ಲಿ ನಮ್ಮನ್ನು ಪ್ರಶ್ನಿಸುತ್ತಿರುವವರಿಗೆ ಉತ್ತರ ಕೊಡಲಾಗುತ್ತಿಲ್ಲ ಎಂದು ದೆಹಲಿಯಲ್ಲಿ ಸಿಕ್ಕ ಬಿಜೆಪಿ ನಾಯಕರೊಬ್ಬರು ಅಸಮಾಧಾನ ಹಂಚಿಕೊಂಡಿದ್ದಾರೆ.

ಜನ್​ಧನ್ ಹಣ ಬಿಡುಗಡೆಯಾಗದ್ದರ ಬಗ್ಗೆ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಜೂನ್ ತಿಂಗಳಾಂತ್ಯದಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್​ಗೆ ಪತ್ರ ಬರೆದಿದ್ದರು. ‘2 ದಿನಗಳ ಹಿಂದೆ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಈ ಬಗ್ಗೆ ವಿವರಿಸಿದ್ದೇನೆ. ಅವರು ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ’ ಎಂದು ಉದಾಸಿ ಪ್ರತಿಕ್ರಿಯಿಸಿದ್ದಾರೆ.

ಹಣ ಬಿಡುಗಡೆ ಆಗಿಲ್ಲ: ವಾಸ್ತವದಲ್ಲಿ, ಕರ್ಣಾಟಕ ಬ್ಯಾಂಕ್​ಗೆ ಕೇಂದ್ರ ಹಣಕಾಸು ಸಚಿವಾಲಯದಿಂದ ಹಣ ಬಿಡುಗಡೆ ಮಾಡದಿರುವುದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ. ಹಣ ಬಿಡುಗಡೆಗೆ ಕೋರಿ ಬ್ಯಾಂಕ್ ಅಧಿಕಾರಿಗಳು ಹಣಕಾಸು ಸಚಿವಾಲಯಕ್ಕೆ ಹಲವಾರು ಬಾರಿ ಪತ್ರ ಬರೆದಿದ್ದಾರೆ. ‘ನಾವು ಬರೆದ ಯಾವ ಪತ್ರಕ್ಕೂ ಅಲ್ಲಿಂದ ಉತ್ತರ ಬರಲಿಲ್ಲ. ಹೀಗಾಗಿ, ದೂರವಾಣಿ ಮುಖೇನ ಅಲ್ಲಿನ ಅಧಿಕಾರಿಗಳನ್ನು ಸಂರ್ಪಸಿ ವಿವರಣೆ ಕೇಳಿದೆವು. ಜನ್​ಧನ್ ಖಾತೆಗೆ ಸಂಬಂಧಿಸಿದಂತೆ 2016ರಲ್ಲಿ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದ ವೆಬ್​ಸೈಟ್​ವೊಂದರಲ್ಲಿ ನಾವು ನೋಂದಾಯಿಸಬೇಕಿತ್ತು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ, ಈ ತಾಂತ್ರಿಕ ದೋಷಗಳಿಂದಾಗಿ ಜನ್​ಧನ್ ಖಾತೆಯುಳ್ಳ ಬಡ ಮಹಿಳೆಯರಿಗೆ ಸಮಸ್ಯೆಯಾಗಿದೆ’ ಎಂದು ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಮಂಜುನಾಥ್ ಭಟ್ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡರು.

ಕರ್ಣಾಟಕ ಬ್ಯಾಂಕ್ ಅಧಿಕಾರಿಗಳು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂಲಕವೂ ಹಣಕಾಸು ಸಚಿವಾಲಯಕ್ಕೆ ಹಣ ಬಿಡುಗಡೆ ಬಗ್ಗೆ ಪತ್ರ ಬರೆದಿದ್ದರು. ಆದರೂ, ಪ್ರಯೋಜನವಾಗಿಲ್ಲ. ಹಾವೇರಿ ಜಿಲ್ಲೆಯೊಂದರಲ್ಲೇ 1400ಕ್ಕಿಂತಲೂ ಹೆಚ್ಚು ಮಹಿಳೆಯರು ಜನ್​ಧನ್ ಖಾತೆ ಹೊಂದಿದ್ದಾರೆ. ಕರ್ಣಾಟಕ ಬ್ಯಾಂಕ್​ನ ಒಟ್ಟು 1.25 ಲಕ್ಷಕ್ಕಿಂತಲೂ ಹೆಚ್ಚು ಜನ್​ಧನ್ ಮಹಿಳಾ ಖಾತೆದಾರರಿಗೆ ಹಣ ಬರಬೇಕಿದೆ ಎನ್ನಲಾಗಿದೆ.

ಶೀಘ್ರದಲ್ಲಿ ಈ ಹಣ ಜನ್​ಧನ್ ಖಾತೆ ಹೊಂದಿದ ಮಹಿಳೆ ಯರಿಗೆ ತಲುಪಲಿದೆ ಎಂಬ ಭರವಸೆ ನನ್ನದು. ತಾಂತ್ರಿಕ ದೋಷ ನಿವಾರಣೆಗೆ ಯತ್ನಿಸಲಾಗುತ್ತಿದೆ. | ಶಿವಕುಮಾರ್ ಉದಾಸಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net