

ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕೆ ಇಳಿಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಸಿದ್ಧವಾಗಿದೆ. ಕಠಿಣ ತರಬೇತಿಯಲ್ಲಿ ಆರ್ಸಿಬಿ ತಂಡ ತೊಡಗಿಕೊಂಡಿದ್ದು, ನಾಯಕ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರ ಲೆಂಜೆಂಡರಿ ಸೂಪರ್ ಮ್ಯಾನ್ ಕ್ಯಾಚ್ ಅನ್ನು ಮರುಸೃಷ್ಟಿಸುವ ಮೂಲಕ ಎದುರಾಳಿ ತಂಡಕ್ಕೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಕಳೆದ ಸಂಜೆ ನಡೆದ ತರಬೇತಿ ವೇಳೆ ಕೊಹ್ಲಿ ಅವರು ಲೆಜೆಂಡರಿ ಸೂಪರ್ ಮ್ಯಾನ್ ಕ್ಯಾಚ್ ಅನ್ನು ಮರು ಸೃಷ್ಟಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಆರ್ಸಿಬಿ ಅಧಿಕೃತ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಲಾಗಿದೆ. ಚಿತ್ರದಲ್ಲಿ ಒಂದು ಕಡೆ ಎಬಿಡಿ ಮತ್ತೊಂದು ಕಡೆ ಕೊಹ್ಲಿ ಕ್ಯಾಚ್ ಹಿಡಿಯುತ್ತಿರುವ ದೃಶ್ಯವಿದೆ. ಸದ್ಯ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
2018ರ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಬಿಡಿ ಅದ್ಭುತ ಕ್ಯಾಚ್ ಹಿಡಿದಿದ್ದರು. ಆಂಗ್ಲ ಆಟಗಾರ ಅಲೆಕ್ಸ್ ಹೇಲ್ಸ್ ಬಲವಾಗಿ ಬಾರಿಸಿದ ಚೆಂಡ್ ಗಾಳಿಯಲ್ಲಿ ಹಾರಿ ಬೌಂಡರಿ ಗೆರೆಯನ್ನು ದಾಟುವಾಗ ಎಬಿಡಿ ಸೂಪರ್ ಮ್ಯಾನ್ ರೀತಿಯಲ್ಲಿ ಮೇಲಕ್ಕೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು.
ಇದೀಗ ಇದೇ ದೃಶ್ಯವನ್ನು ಕೊಹ್ಲಿ ಮರು ಸೃಷ್ಟಿಸಿದ್ದಾರೆ. ಇಬ್ಬರು ಆಟಗಾರರು ಸಹ ಆರ್ಸಿಬಿ ತಂಡದ ಪ್ರಧಾರ ಆಧಾರಸ್ತಂಭಗಳಾಗಿದ್ದಾರೆ. ಇಬ್ಬರ ನಡುವಿನ ಸ್ನೇಹವು ಸಹ ಐಪಿಎಲ್ನಿಂದಾಗಿ ಗಟ್ಟಿಯಾಗಿದ್ದು, ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದು ಒಂದು ಉದಾಹರಣೆ. (ಏಜೆನ್ಸೀಸ್)