ಲಂಡನ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿಯ ಟೆಕ್ಕಿ; 50ದಿನಗಳ ಬಳಿಕ ಊರಿಗೆ ಬರುತ್ತಿದೆ ಮೃತದೇಹ

Ambulance 10 May 20
Published on

ಹುಬ್ಬಳ್ಳಿ: ಲಂಡನ್​​ನಲ್ಲಿ ನೆಲೆಸಿದ್ದ ಹುಬ್ಬಳ್ಳಿ ಮೂಲದ ಟೆಕ್ಕಿಯೋರ್ವ ಅಲ್ಲಿ ಆತ್ಮಹತ್ಯೆ ಮಾಡಿಕೊಂಡು 50 ದಿನಗಳು ಕಳೆದಿವೆ. ಈಗ ಅವರ ಶವವನ್ನು ಭಾರತಕ್ಕೆ ತಂದು, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ.

ಹುಬ್ಬಳ್ಳಿ ನವನಗರದ ಟೆಕ್ಕಿ ಗದಿಗೆಪ್ಪಗೌಡ ಪಾಟೀಲ್​ ಲಂಡನ್​​ನಲ್ಲಿ ಪತ್ನಿ ಶಿವಲೀಲಾ, ಮಗ ಶಿವಾನಂದ್​ ಪಾಟೀಲ್​ ಹಾಗೂ ಪತ್ನಿಯ ಸಹೋದರನೊಂದಿಗೆ ಲಂಡನ್​​ನಲ್ಲಿ ವಾಸವಾಗಿದ್ದರು. ಮಾ.13ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ಹುಬ್ಬಳ್ಳಿಯಲ್ಲಿರುವ ಅವರ ಕುಟುಂಬಸ್ಥರಿಗೆ ಗದಿಗೆಪ್ಪ ಅವರ ಅಂತ್ಯಕ್ರಿಯೆಯನ್ನು ಊರಲ್ಲೇ ಮಾಡಬೇಕು..ಕೊನೇ ಬಾರಿ ಅವರ ಮುಖ ನೋಡಬೇಕು ಎಂಬ ಆಸೆ. ಆದರೆ ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ 50 ದಿನಗಳಾದರೂ ಶವವನ್ನು ಹಾಗೇ ಇಡಲಾಗಿದೆ. ಇಂದು ಬೆಂಗಳೂರಿಗೆ ಬರಲಿದ್ದು, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಹುಬ್ಬಳ್ಳಿಗೆ ಕೊಂಡೊಯ್ಯಲಾಗುವುದು ಎನ್ನಲಾಗಿದೆ.

ಈಗ ಕೇಂದ್ರ ಸರ್ಕಾರ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕೇಂದ್ರ ಸರ್ಕಾರ ವಾಪಸ್​ ಕರೆತರುವ ಪ್ರಯತ್ನ ಮಾಡುತ್ತಿದೆ. ಗದಿಗೆಪ್ಪ ಪಾಟೀಲ್​ ಅವರ ಕುಟುಂಬದವರೂ ಸಹ 15 ದಿನಗಳ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ಬಳಿ ಮನವಿ ಮಾಡಿದ್ದರು. ಕೇಂದ್ರ ಆರೋಗ್ಯ ಇಲಾಖೆ, ಲಂಡನ್​ ಸರ್ಕಾರದ ಜತೆ ಮಾತುಕತೆ ನಡೆಸಿತ್ತು.

ಇದೀಗ ಮೃತದೇಹವನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ಹಾಗೇ ಗದಿಗೆಪ್ಪ ಅವರ ಪತ್ನಿ, ಮಗು ಕೂಡ ಭಾರತಕ್ಕೆ ಬರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net