ಟೆಕ್ಕಿಗಳೇ ಶಂಕಿತ ಉಗ್ರರ ಟಾರ್ಗೆಟ್..?

nia
Published on

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶಂಕಿತ ಉಗ್ರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಸ್‌ಟಾವೇರ್ ಕಂಪನಿಗಳೇ ಟಾರ್ಗೆಟ್ ಆಗಿದ್ದವು. ಕಂಪನಿಗಳಿಗೆ ಬಿಗಿ ಭದ್ರತೆ ಇದ್ದ ಕಾರಣಕ್ಕೆ ಟೆಕ್ಕಿಗಳೇ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದ ರಾಮೇಶ್ವರಂ ಕೆೆಯಲ್ಲಿ ಸ್ಫೋಟಿಸಿರುವುದಾಗಿ ಬಂಧಿತರ ಶಂಕಿತರು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಬೆಂಗಳೂರಿನ ಎನ್‌ಐಎ ಕಚೇರಿಯಲ್ಲಿ ಬಂಧಿತ ಅಬ್ದುಲ್ ಮತೀನ್ ಅಹ್ಮದ್ ತಾಹಾ (29) ಮತ್ತು ಮುಸ್ಸಾವೀರ್ ಹುಸೇನ್ ಶಬೀಬ್ (30)ನನ್ನು ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗ ಸ್ಫೋಟಕ ವಿಷಯ ಬಹಿರಂಗವಾಗಿವೆ.

ಕೆಫೆ ಸ್ಪೋಟದ ಬಾಂಬರ್ ಸೇರಿ ಶಂಕಿತ ಉಗ್ರರ ಗುರಿ ಮುಖ್ಯವಾಗಿ ಹಿಂದುಗಳಾಗಿದ್ದು, ಐಟಿ ಬಿಟಿ ಕಂಪನಿಗಳ ನಡುವೆಯೇ ಬಾಂಬ್ ಇಡಲು ಮೊದಲು ಸಂಚು ರೂಪಿಸಿದ್ದರು. ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್) ವಿಧ್ವಂಸಕ ಕೃತ್ಯ ನಡೆಸಿದರೆ ಜಗತ್ತಿಗೆ ಸಂದೇಶ ಹೋಗಲಿದೆ ಎಂದು ಪಿತೂರಿ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಎಸ್‌ಎಜೆಡ್ ಏರಿಯಾದಲ್ಲಿ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳಿವೆ. ಸಾವಿರಾರು ಮಂದಿ ಇಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದು, ಇಲ್ಲಿ ಸ್ಫೋಟ ನಡೆಸಿದರೆ ದೇಶ ಮತ್ತು ವಿದೇಶಗಳಿಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಅಂತಾರಾಷ್ಟ್ರೀಯವಾಗಿ ಕುಖ್ಯಾತಿ ಗಳಿಸಬಹುದು. ಇದರಿಂದ ಮತ್ತಷ್ಟು ಯುವಕರನ್ನು ಐಸಿಸ್‌ಗೆ ಸೆಳೆಯಬಹುದು ಎಂದು ಶಂಕಿತರು ವೈಟ್‌ಫೀಲ್ಡ್‌ನ ಹಲವೆಡೆ ಸುತ್ತಾಡಿದ್ದರು. ಆದರೆ, ಐಟಿ ಬಿಟಿ ಪ್ರದೇಶದಲ್ಲಿ ಬಾಂಬ್ ಇಡುವುದು ಅಷ್ಟು ಸುಲಭವಾಗಿರಲಿಲ್ಲ. ಎಲ್ಲೆಡೆ ಭದ್ರತೆ, ಸಿಸಿ ಕ್ಯಾಮರಾ ಕಣ್ಗಾವಲು, ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು. ಅವುಗಳ ಕಣ್ತಪ್ಪಿಸಿ ಕಂಪನಿ ಕಂಪೌಂಡ್‌ಗಳ ಒಳಗೆ ಹೋಗುವುದು ಸುಲಭವಾಗಿರಲಿಲ್ಲ.

ಕೊನೆಗೆ ಸ್‌ಟಾವೇರ್ ಇಂಜಿನಿಯರ್‌ಗಳು ಹೆಚ್ಚಾಗಿ ಬರುತ್ತಿದ್ದ ರಾಮೇಶ್ವರಂ ಕೆಫೆಯನ್ನು ಗುರುತಿಸಿ ಟಾರ್ಗೆಟ್ ಮಾಡಿದ್ದರು. ಕೆಫೆ ಒಳ ಹೋಗಲು ಯಾವುದೇ ಅಡೆತಡೆ ಇರುವುದಿಲ್ಲ. ಭದ್ರತೆ, ಮೆಟಲ್ ಡಿಟೆಕ್ಟರ್ ಕೂಡ ಇಲ್ಲ.

ಬಾಂಬ್ ಸ್ಫೋಟ ನಡೆಸಲು ರಾಮೇಶ್ವರಂ ಕೆಫೆ ಸೂಕ್ತ ಸ್ಥಳ ಎಂದು ಆಯ್ಕೆ ಮಾಡಿದ್ದರು. ಅಲ್ಲದೆ ರಾಮಮಂದಿರ ಉದ್ಘಾಟನೆಯಾಗಿದ್ದು, ಈ ಸಮಯದಲ್ಲಿ ಕೆಫೆ ಮುಂಭಾಗದಲ್ಲಿ ಸಂಭ್ರಮಾಚರಣೆ ಕೂಡ ನಡೆದಿತ್ತು. ಊಟದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದರು. ಅದಕ್ಕಾಗಿ ಮಾರ್ಚ್ 1ರ ಮಧ್ಯಾಹ್ನ 12.55ಕ್ಕೆ ಬಾಂಬ್ ಸ್ಫೋಟಿಸುವಂತೆ ಟೈಮರ್ ಬಾಂಬ್ ಇಟ್ಟು ಕೃತ್ಯ ಎಸಗಿದ್ದಾಗಿ ಬಂಧಿತ ಶಂಕಿತ ಉಗ್ರರು ಎನ್‌ಐಎ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net