

ಮುಂಬೈ: ಕೊವಿಡ್-19 ನಿಂದಾಗಿ ಶಿಕ್ಷಣ ಕ್ಷೇತ್ರ ಸ್ಥಗಿತಗೊಂಡಿದೆ. ಪ್ರಾಥಮಿಕ ಶಾಲೆಗಳಿಂದ ಹಿಡಿದು, ಕಾಲೇಜಿನವರೆಗೆ ಎಲ್ಲವೂ ಕಳೆದ ನಾಲ್ಕು ತಿಂಗಳಿಂದಲೂ ಬಂದ್ ಆಗಿವೆ. ಈ ಮಧ್ಯೆ ಆನ್ಲೈನ್ ಶಿಕ್ಷಣ ಪ್ರಾರಂಭವಾಗಿದೆ. ಸ್ಮಾರ್ಟ್ಫೋನ್, ಇಂಟರ್ನೆಟ್ ಸೌಕರ್ಯ ಇರುವ ಮಕ್ಕಳು ಆನ್ಲೈನ್ ಮೂಲಕ ಕಲಿಕೆ ಪ್ರಾರಂಭಿಸಿದ್ದರೆ, ಅದೆಲ್ಲ ಇಲ್ಲದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಈ ಸಮಸ್ಯೆಯನ್ನು ನಿವಾರಿಸಿ ಎಲ್ಲವರ್ಗದ ಮಕ್ಕಳಿಗೂ ಶಿಕ್ಷಣ ನೀಡುವ ಸಲುವಾಗಿ ಮಹಾರಾಷ್ಟ್ರದ ಸೋಲಾಪುರ ನಗರದ ಶಾಲೆ ಹೊಸ ವಿಧಾನವನ್ನು ಕಂಡುಕೊಂಡಿದೆ. ಸುತ್ತಲಿನ ಮನೆಗಳ ಕಾಂಪೌಂಡ್ ಗೋಡೆಗಳ ಮೇಲೆ ಪಠ್ಯಪುಸ್ತಕಗಳಲ್ಲಿರುವ ವಿಷಯಗಳನ್ನು ಚಿತ್ರಿಸುವ ಮೂಲಕ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
ಸೋಲಾಪುರದ ನೀಲಂನಗರದಲ್ಲಿರುವ ಸುಮಾರು 300 ಮನೆಗಳ ಕಾಂಪೌಂಡ್, ಹೊರಗಿನ ಗೋಡೆಗಳ ಮೇಲೆ 1-10ನೇ ತರಗತಿಯವರೆಗಿನ ವಿವಿಧ ಪಾಠಗಳನ್ನು ಸರಳೀಕರಿಸಿ ಬರೆಯಲಾಗಿದೆ. ಆಯಾ ತರಗತಿಯ ವಿದ್ಯಾರ್ಥಿಗಳು ತಮ್ಮ ಪಠ್ಯ ಬರೆದಿರುವ ಗೋಡೆಗಳ ಎದುರು, ಸಾಮಾಜಿಕ ಅಂತರ ನಿಯಮ ಪಾಲನೆಯೊಂದಿಗೆ ನಿಂತು, ಪಾಠಗಳನ್ನು ಕಲಿಯುತ್ತಿದ್ದಾರೆ. ಹಿಂದೆ ಕಲಿತಿದ್ದನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳುತ್ತಿದ್ದಾರೆ ಎಂದು ನೀಲಂನಗರದ ಆಶಾ ಮರಾಠಿ ವಿದ್ಯಾಲಯ ಪ್ರಾಥಮಿಕ ಶಾಲೆ ಶಿಕ್ಷಕ ರಾಮ್ ಗಾಯಕ್ವಾಡ್ ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕರ ದಿನದಂದು ಕೋಚ್‌ಗಳಿಗೆ ನಮಿಸಿದ ಕ್ರೀಡಾ ತಾರೆಯರು…!
ಕೊವಿಡ್-19 ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ನಡೆಯುತ್ತಿದೆ. ಆದರೆ ಈ ಭಾಗದ ಹಲವು ವಿದ್ಯಾರ್ಥಿಗಳು ಬಡಕುಟುಂಬದವರು. ಅವರಲ್ಲಿ ಸ್ಮಾರ್ಟ್ಫೋನ್ ಇಲ್ಲ. ಅವರು ಆನ್ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನೆಯ ಗೋಡೆಗಳ ಮೇಲೆಯೇ ಪಠ್ಯಗಳನ್ನು ಬರೆಯಲಾಗುತ್ತಿದೆ. ವಿದ್ಯಾರ್ಥಿಗಳು ಬಂದು ಅಭ್ಯಸಿಸುತ್ತಾರೆ ಎಂದು ಹೇಳಿದ್ದಾರೆ.
ಪಠ್ಯಗಳನ್ನು ಸರಳೀಕರಿಸಿ ಪೇಂಟ್ ಮಾಡಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗುತ್ತಿದೆ. ಹೊಸ ವಿಧಾನದ ಮೂಲಕ ಕಲಿಯಲು ವಿದ್ಯಾರ್ಥಿಗಳೂ ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೇ ನಾವು ಆನ್ಲೈನ್ ಕ್ಲಾಸ್ಗಳನ್ನೂ ನಡೆಸುತ್ತಿದ್ದೇವೆ. ಸ್ಮಾರ್ಟ್ಫೋನ್ ಇದ್ದವರು ಅದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)