6 ತಿಂಗಳಲ್ಲಿ ಶಿಕ್ಷಣ ಇಲಾಖೆ ಆನ್​ಲೈನ್, ಶಿಕ್ಷಕರ ಸಾಮರ್ಥ್ಯವೃದ್ಧಿ: ಸಚಿವ ನಾಗೇಶ್ ಮಾಹಿತಿ

B C Nagesh
Published on

ಬೆಂಗಳೂರು: ಶಿಕ್ಷಣ ಇಲಾಖೆಯ ಸಾಧ್ಯವಾದಷ್ಟು ಕೆಲಸಗಳನ್ನು ಆರು ತಿಂಗಳಲ್ಲಿ ಆನ್​ಲೈನ್​ಗೊಳಿಸಲಾಗುತ್ತದೆ. ಕಡತ ವಿಲೇವಾರಿಗೆ ಇ- ಆಫೀಸ್ ಬಳಕೆ ಕಡ್ಡಾಯಗೊಳಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ವಿಜಯವಾಣಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ ಅವರು ಇಲಾಖೆಗೆ ಹೊಸ ರೂಪ ನೀಡಲು ನಡೆಸಿರುವ ಪ್ರಯತ್ನಗಳನ್ನು ವಿವರಿಸಿದರು.

ಲಂಚಗುಳಿತನಕ್ಕೆ ಬ್ರೇಕ್ ಹಾಕಲು ‘ಆಟೋಮೇಷನ್’, ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ‘ಸಾಮರ್ಥ್ಯವೃದ್ಧಿ’ಗೆ ವಿಶೇಷ ಪ್ರಯತ್ನ, ಆಧಾರ್ ನೆರವು ಬಳಸಿ ‘ಟ್ರಾ್ಯಕಿಂಗ್’, ಕಾಲಮಿತಿಯಲ್ಲಿ ನೇಮಕ ಪ್ರಕ್ರಿಯೆ ಮುಗಿಸುವುದು ಸೇರಿದಂತೆ ವಿವಿಧ ಕ್ರಮಗಳ ಮೂಲಕ ಇಲಾಖೆಗೆ ಹೊಸ ಹೊಳಪು ನೀಡಲಾಗುತ್ತಿದೆ. ಇ-ಆಫೀಸ್ ವ್ಯವಸ್ಥೆಯಲ್ಲಿ ಸಂಬಂಧಪಟ್ಟವರು ಕಾಲಮಿತಿಯಲ್ಲಿ ಕಡತ ವಿಲೇವಾರಿ ಮಾಡದಿದ್ದರೆ, ಮುಂದಿನ ಅಧಿಕಾರಿಗೆ ರವಾನೆಯಾಗುತ್ತಲ್ಲದೇ, ಸಂಬಂಧಪಟ್ಟವರಿಗೆ ನೋಟಿಸ್ ಕೂಡ ಜಾರಿಯಾಗುತ್ತದೆ ಎಂದು ತಿಳಿಸಿದರು.ಶಿಕ್ಷಕರಿಗೆ ಆಗುತ್ತಿರುವ ಅನೇಕ ಅಡಚಣೆಗಳು ಇ-ಆಫೀಸ್ ಮೂಲಕ ಬಗೆಹರಿಯಲಿದ್ದು, ಅವ್ಯವಹಾರಕ್ಕೂ ಅವಕಾಶ ಇಲ್ಲವಾಗುತ್ತದೆ. ಅಲ್ಲದೇ, ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಆಗಲಿದೆ ಎಂಬ ನಿರೀಕ್ಷೆ ಸಚಿವರದ್ದು.

ಶಿಕ್ಷಕರ ಕೊರತೆ ನಿವಾರಣೆ: 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆಂದೇ 5 ಸಾವಿರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹರು ಸಿಗದಿದ್ದಲ್ಲಿ 2023ರ ಫೆಬ್ರವರಿಯಲ್ಲಿ ಮತ್ತೊಮ್ಮೆ ಸಿಇಟಿ ನಡೆಸಲಾಗುತ್ತದೆ. ಅದಕ್ಕೂ ಮುನ್ನ ಅಂದರೆ 2022 ನವೆಂಬರ್​ನಲ್ಲಿ ಟಿಇಟಿಯನ್ನೂ ನಡೆಸಲಾಗುತ್ತಿದೆ. ಇದರಿಂದ ಮತ್ತಷ್ಟು ಅರ್ಹರು ಲಭ್ಯರಾಗುತ್ತಾರೆ ಎಂದರು.

ಶಿಕ್ಷಕರ ಸಾಮರ್ಥ್ಯ ವೃದ್ದಿ: ಸರ್ಕಾರಿ ಶಾಲೆ ಗುಣಮಟ್ಟ ಕಡಿಮೆ ಇದೆ ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಆದರೆ, ಇದನ್ನು ಪೂರ್ಣ ಒಪ್ಪಲ್ಲ. ಶಿಕ್ಷಕರು ಅಪ್ಡೇಟ್ ಆಗಬೇಕು, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಲಿದೆ. ಅವರ ಸಾಮರ್ಥ್ಯ ವೃದ್ಧಿಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಶಿಕ್ಷಕರ ನೇಮಕಕ್ಕೆ ನಮ್ಮಲ್ಲಿರುವ ಕಠಿಣ ವ್ಯವಸ್ಥೆ ಬೇರೆಲ್ಲೂ ಇಲ್ಲ. ಟಿಇಟಿ, ಸಿಇಟಿ ಬಳಿಕ ಮೆರಿಟ್ ಆಧರಿಸಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ನಗರವನ್ನೇ ಕಾಣದ, ರೈಲೇ ನೋಡದ, ವಿಮಾನ ಹತ್ತದ ಶಿಕ್ಷಕರಿದ್ದಾರೆ. ಅವರು ಮಕ್ಕಳಿಗೆ ಆ ಕಲ್ಪನೆ ಕೊಡಲು ಅಥವಾ ಹೊಸ ಕನಸು ಮೂಡಿಸಲು ಸಾಧ್ಯವಿಲ್ಲ. ಹೀಗಾಗಿ ಟೀಚಿಂಗ್ ಒಂದೇ ಇಲ್ಲ, ಸಾಮಾನ್ಯ ಜ್ಞಾನ ವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲೂ ಯೋಚನೆ ನಡೆದಿದೆ. ಇವತ್ತಿನ ಅವಶ್ಯಕತೆಗೆ ತಕ್ಕಂತೆ ಕೆಪಾಸಿಟಿ ಬಿಲ್ಡಿಂಗ್ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಡಾ.ಸುದರ್ಶನ್ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ನಾಗೇಶ್ ವಿವರಿಸಿದರು.

ಅಂಗನವಾಡಿಯತ್ತ ಗಮನ: ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಮಹತ್ವ ನೀಡುವ ಅಗತ್ಯ ಹೆಚ್ಚಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಈ ಹಂತದಲ್ಲಿ ಒತ್ತುಕೊಡುವ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸಿ ಅವರ ವಿದ್ಯಾರ್ಹತೆ ಆಧರಿಸಿ ಸೂಕ್ತ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಸಮವಸ್ತ್ರ, ಪಠ್ಯಕ್ಕೆ ಟೆಂಡರ್: ಮುಂದಿನ ಶೈಕ್ಷಣಿಕ ಸಾಲಿನ (2023-24) ಆರಂಭದಲ್ಲೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಪೂರೈಕೆಗೆ ಶೀಘ್ರ ಟೆಂಡರ್ ಕರೆದು ಅಂತಿಮಗೊಳಿಸಲಾಗುತ್ತದೆ. ಇದರಿಂದ ಮುಂದಿನ ಜೂನ್​ನಲ್ಲಿ ಕೊರತೆ, ವ್ಯತ್ಯಾಸಗಳು ಇರುವುದಿಲ್ಲ. ಹದಿನೈದು ದಿನಗಳಲ್ಲಿ ಎಲ್ಲ ಮಕ್ಕಳಿಗೂ ಎರಡನೇ ಜತೆ ಸಮವಸ್ತ್ರ ಪೂರೈಕೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net