ಮಗಳಿಗೆ ಹೊಡೆದ್ರು ಅಂತ ಶಾಲೆಗೆ ತೆರಳಿ ಶಿಕ್ಷಕನನ್ನೇ ಥಳಿಸಿದ ಪಾಲಕರು!

terrorist arrested
Published on

ತಮಿಳುನಾಡು: ಇತ್ತೀಚೆಗೆ ಶಾಲೆಯಲ್ಲಿ ಮಕ್ಕಳನ್ನು ದಂಡಿಸುವುದೇ ದೊಡ್ಡ ಅಪರಾಧ ಎಂಬಂತಾಗುತ್ತಿದೆ. ಮಾತ್ರವಲ್ಲ, ಮಕ್ಕಳನ್ನು ಶಿಕ್ಷಿಸಿದರೆ ಪಾಲಕರು ಪ್ರಶ್ನಿಸುವ ಪರಿಪಾಠವೂ ಬೆಳೆದಿದೆ. ಅಂಥದ್ದೇ ಒಂದು ಪ್ರಕರಣ ತಮಿಳುನಾಡಿನಲ್ಲಿ ನಡೆದಿದೆ. ಇಲ್ಲಿ ಪಾಲಕರು ಶಿಕ್ಷಕನಿಗೇ ಬಾರಿಸಿದ್ದಾರೆ.

ತಮಿಳುನಾಡಿನ ಟೂಟಿಕೊರಿನ್​ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕ ಆರ್​. ಭರತ್​ ಹಲ್ಲೆಗೊಳಗಾದವ. ಏಳನೇ ತರಗತಿಯ ವಿದ್ಯಾರ್ಥಿನಿಯ ಪಾಲಕರು ಈ ಕೃತ್ಯ ಎಸಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲನ್ನೂ ತಲುಪಿದೆ.

ವಿದ್ಯಾರ್ಥಿನಿ ಪಾಠದ ಕಡೆಗೆ ಗಮನ ಕೊಡುತ್ತಿಲ್ಲ, ಇತರ ವಿದ್ಯಾರ್ಥಿನಿಯರ ಜತೆ ಜಗಳ ಆಡುತ್ತಿದ್ದಳು ಎಂಬ ಕಾರಣಕ್ಕೆ ಆಕೆಯ ಕುಳಿತುಕೊಳ್ಳುವ ಸ್ಥಳ ಬದಲಿಸಲು ಸೂಚಿಸಿದ್ದೆ. ಹೀಗೆ ಬೇರೆ ಬೆಂಚ್​ನಲ್ಲಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಆಕೆ ಬಿದ್ದಿದ್ದಳು ಎಂದು ಶಿಕ್ಷಕ ತಿಳಿಸಿದ್ದಾನೆ.

ಇದೇ ಕಾರಣಕ್ಕೆ ವಿದ್ಯಾರ್ಥಿನಿ ಪಾಲಕರು ಶಾಲೆಗೆ ಧಾವಿಸಿ ಶಿಕ್ಷಕನಿಗೆ ಬಾರಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿ ತಾಯಿ ಸೆಲ್ವಿ ಎಂಬಾಕೆ, 'ಮಕ್ಕಳನ್ನು ಹೊಡೆಯವುದು ಕಾನೂನುಬಾಹಿರ, ಹೊಡೆಯುವ ಹಕ್ಕು ಕೊಟ್ಟಿದ್ಯಾರು? ನಾನು ನಿನಗೆ ಚಪ್ಪಲಿಯಲ್ಲಿ ಬಾರಿಸುತ್ತೇನೆ' ಎಂದು ಅಬ್ಬರಿಸಿದ್ದಾಳೆ. ಪೊಲೀಸರು ವಿದ್ಯಾರ್ಥಿನಿ ಪಾಲಕರು ಹಾಗೂ ಅಜ್ಜನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net