

ಬೆಂಗಳೂರು
ಶಿಕ್ಷಕರ ಮತ್ತು ಖಾಸಗಿ ಶಾಲೆಗಳ ಸಮಸ್ಯೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಒಕ್ಕೂಟ(ಕ್ಯಾಮ್ಸ್) ಡಿ.16ರಂದು "ನಮ್ಮ ನಡೆ ಶಿಕ್ಷಕರ ಕಡೆ, ಶಿಕ್ಷಣ ಸಂಸ್ಥೆಗಳು& ಶಿಕ್ಷಕರು ಉಳಿದರೆ ಶಿಕ್ಷಣ' ಎಂಬ ಶೀರ್ಷಿಕೆ ಅಡಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ.
ಡಿ.16ರಂದು ಬೆಳಗ್ಗೆ 10 ಗಂಟೆಗೆ ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಅನಂತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದೆ. ಶಿಕ್ಷಕ& ಶಿಕ್ಷಕೇತರ ಸಿಬ್ಬಂದಿಗೆ ಕೋವಿಡ್ ಲಸಿಕೆಯನ್ನು ಪ್ರಥಮ ಹಂತದಲ್ಲಿ ನೀಡಬೇಕು. ಆಹಾರ ಕಿಟ್ ನೀಡಬೇಕು, ಗೌರವಧನ ನೀಡಬೇಕು, ಪ್ರತ್ಯೇಕ ವಿಮೆ ಸೌಲಭ್ಯ ನೀಡಬೇಕು. ಶಿಕ್ಷಣ ಸಂಸ್ಥೆಗಳ ಮರು ಆರಂಭ, ದಾಖಲಾತಿ, ಹಾಜರಾಗಿ, ಕನಿಷ್ಠ ಮೌಲ್ಯಮಾಪನದ ತೇರ್ಗಡೆ, ಬಾಕಿ ಹಾಗೂ ಪ್ರಸ್ತುತ ಕನಿಷ್ಠ ಶುಲ್ಕವನ್ನು ಪಾವತಿಸುವ ಬಗ್ಗೆ ಸ್ಪಷ್ಟೀಕರಣ ಆದೇಶ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.