ತನ್ನ ಬದಲಿಗೆ ಪಾಠ ಮಾಡಲು 6 ಸಾವಿರ ರೂ. ಸಂಬಳಕ್ಕೆ ಶಿಕ್ಷಕಿಯನ್ನು ನೇಮಿಸಿದ ಕಲಬುರಗಿ ಶಿಕ್ಷಕ!

teacher
Published on

ಕಲಬುರಗಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ತಮ್ಮ ಬದಲಿಗೆ ಮಕ್ಕಳಿಗೆ ಪಾಠ ಮಾಡುವಂತೆ ಇನ್ನೊಬ್ಬ ಶಿಕ್ಷಕಿಗೆ ಹೇಳಿದ ವಿಚಿತ್ರ ಘಟನೆ ಕಲಬುರಗಿಯ ವಾಡಿ ಸಮೀಪದ ಬಾಳಿನಾಯ್ಕ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಹೌದು, ಮೂಲಗಳ ಪ್ರಕಾರ ಶಿಕ್ಷಕ ಮಹೇಂದ್ರ ಕುಮಾರ್‌ ವಾರಕ್ಕೆ ಎರಡು ದಿನ ಮಾತ್ರ ಶಾಲೆಗೆ ತೆರಳಿ, ಹಾಜರಾತಿ ನೋಂದಣಿಗೆ ಸಹಿ ಹಾಕಿ ಹೋಗುತ್ತಿದ್ದರು. ಶಾಲೆಯಲ್ಲಿ 25 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರಿದ್ದಾರೆ. ಮಹೇಂದ್ರ ಕುಮಾರ್‌ ಹಾಗೂ ಶಾಲೆಯ ಮುಖ್ಯಶಿಕ್ಷಕ ಅಯ್ಯಪ್ಪ ಗುಂಡಗುರ್ತಿ ಮಾತ್ರ ಶಾಲೆಯಲ್ಲಿದ್ದಾರೆ. ಆದರೆ ಮಹೇಂದ್ರ ಕುಮಾರ್‌ ನಿರಂತರವಾಗಿ ಗೈರಾಗುತ್ತಿರುವ ಬಗ್ಗೆ ಪೋಷಕರು ಮುಖ್ಯ ಶಿಕ್ಷಕರಿಗೆ ದೂರುಗಳನ್ನು ನೀಡಿದ್ದರು. ಆದರೂ ಮಹೇಂದ್ರ ಕುಮಾರ್‌ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆದ್ದರಿಂದ ಡಿಡಿಪಿಐಗೆ ದೂರು ನೀಡಲು ಪೋಷಕರು ನಿರ್ಧರಿಸಿದರು. ಕೊನೆಗೆ ಮಹೇಂದ್ರ ಕುಮಾರ್‌ ತನ್ನ ಬದಲಾಗಿ ಶಿಕ್ಷಕಿಯನ್ನು ನೇಮಿಸಿ, ಅವರಿಗೆ ಮಾಸಿಕ 6 ಸಾವಿರ ರೂ. ಸಂಬಳ ನೀಡುತ್ತಿದ್ದನು.

ಈ ಕುರಿತು ಪ್ರತಿಕ್ರಯಿಸಿರುವ ಕಲಬುರಗಿ ಡಿಡಿಪಿಐ ಶೇಖರಪ್ಪಗೌಡ ಬಿರಾದಾರ್‌, ಶಿಕ್ಷಕರು ತಮ್ಮ ಬದಲಿಗೆ ಬೇರೆಯವರನ್ನು ನೇಮಿಸುವುದು ಅಪರಾಧ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಮಹೇಂದ್ರ ಕುಮಾರ್‌, ಅನಾರೋಗ್ಯದ ಕಾರಣದಿಂದ ನಾನು ದೀರ್ಘ ರಜೆಯಲ್ಲಿದ್ದೆ. ಆದ್ದರಿಂದ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕಿಯನ್ನು ನೇಮಿಸಿದೆ. ಮುಂದೆ ಶಾಲೆಗೆ ಗೈರಾಗುವುದಿಲ್ಲ ಎಂದಿದ್ದಾರೆ. ಆದರೆ ಶಿಕ್ಷಕ ಮಹೇಂದ್ರ ಕುಮಾರ್‌ಗೆ ಕಾರಣ ಕೇಳಿ ಡಿಡಿಪಿಐ ನೋಟಿಸ್ ಜಾರಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net