

ಚಾಮರಾಜನಗರ: ಸುದೀಪ್ ಹಣ ಪಡೆದು ಸಿನಿಮಾ ಮಾಡಿಲ್ಲವೆಂದು ಆರೋಪ ಮಾಡಿರುವ ನಿರ್ಮಾಪಕರಾದ ಎಮ್ಎನ್ ಕುಮಾರ್, ರೆಹಮಾನ್ ವಿರುದ್ದ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕರ ಆರೋಪಕ್ಕೆ ಅಕ್ರೋಶ ವ್ಯಕ್ತಪಡಿಸಿರುವ ಸುದೀಪ್ ಅಭಿಮಾನಿಗಳು ಎ.ಗಣೇಶ್, ಕುಮಾರ್, ಪ್ರವೀಣ್ ಅವರ ಫೋಟೋಗೆ ಚಪ್ಪಲಿಯಲ್ಲಿ ಹೊಡೆದದ್ದಲ್ಲದೆ, ಚಾಮರಾಜನಗರದಲ್ಲಿ ಬೀದಿಗಳಿದು ಪ್ರತಿಭಟನೆ ಮಾಡಿದ್ದಾರೆ.
ಸದ್ಯ ಅಭಿಮಾನಿಗಳು ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ.ಹರೀಶ್ ಅವರಿಗೆ ಮನವಿ ಸಲ್ಲಿಸಿದ್ದು, ನಿರ್ಮಾಪಕರು ಆಧಾರ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ಈ ಕೂಡಲೇ ನಿರ್ಮಾಪಕರು ಕ್ಷಮೆ ಕೇಳಬೇಕು. ಇನ್ನು ಎರಡು ಮೂರು ದಿವಸದಲ್ಲಿ ಕ್ಷಮೆ ಕೇಳದಿದ್ದರೆ ಹೋರಾಟ ಮಾಡಲಾಗುವುದು. ನಿರ್ಮಾಪಕರ ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಕಿಚ್ಚ ಸುದೀಪ್ ಅಭಿಮಾನಿ ನವೀನ್ ತಂಡದಿಂದ ಎಚ್ಚರಿಕೆ ನೀಡಲಾಗಿದೆ.
ನೋಟಿಸ್ ನೀಡಿದ ಸುದೀಪ್
ಸ್ಯಾಂಡಲ್ವುಡ್ ನಿರ್ಮಾಪಕ, ವಿತರಕ ಎಂ.ಎನ್.ಕುಮಾರ್ ವಿರುದ್ಧ ಸುದೀಪ್ ಇತ್ತೀಚೆಗೆ ದೂರು ನೀಡಿದ್ದರು. “ಸುದೀಪ್ ಅವರು ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ತೆಗೆದುಕೊಂಡು ಕೈಗೆ ಸಿಗುತ್ತಿಲ್ಲ” ಎಂದೆಲ್ಲಾ ಹಲವು ಆರೋಪ ಮಾಡಿದ ಕುಮಾರ್ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ನೀಡಿದ್ದರು. ಹಾಗೆಯೇ ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದರು.
ಸುದ್ದಿಗೋಷ್ಠಿ ನಡೆಸಿದ ನಿರ್ಮಾಪಕರು
ನಿರ್ಮಾಪಕ ಎಂ.ಎನ್.ಕುಮಾರ್ ವಿರುದ್ಧ ನಟ ಸುದೀಪ್ ಕ್ರಿಮಿನಲ್ ಕೇಸ್ ದಾಖಲಿಸಿದ ಬೆನ್ನಲ್ಲೇ ಎಂಎನ್ ಕುಮಾರ್ ಹಾಗೂ ಎನ್ಎಂ ಸುರೇಶ್ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಎಂಎನ್ ಕುಮಾರ್, ಚಿತ್ರೋದ್ಯಮದಲ್ಲಿ ನಿರ್ಮಾಪಕರು ಬಹಳ ಮುಖ್ಯ. ಸಿನಿಮಾರಂಗ ನಡೆಯುತ್ತಿರುವುದೇ ನಂಬಿಕೆ ಮೇಲೆ. ನಾನು ತಪ್ಪು ಮಾತಾಡಿಲ್ಲ, ಅಡ್ವಾನ್ಸ್ ಕೊಟ್ಟಿದ್ದೇನೆ. ಸಿನಿಮಾ ಮಾಡಬೇಕು ಸ್ಪಂದಿಸಿ ಅಂತ ಕೇಳಿದ್ದೆ ಎಂದು ಹೇಳಿದ್ದರು.