ತೆರಿಗೆದಾರರು ವಿರಳ; ಹೊರೆ ಮಾತ್ರ ಹೇರಳ

Tax
Published on
ಜಗತ್ತಿನ ಕೆಲ ದೇಶಗಳಲ್ಲಿ ನೇರ ತೆರಿಗೆಯಾಗಿರುವ ಆದಾಯ (ವರಮಾನ) ತೆರಿಗೆಯನ್ನೇ ವಿಧಿಸಲಾಗುವುದಿಲ್ಲ. ಆದರೆ, ಭಾರತದಲ್ಲಿ ಆದಾಯ ಹೆಚ್ಚಾದಷ್ಟು ಹೆಚ್ಚೆಚ್ಚು ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ 138 ಕೋಟಿಗೂ ಅಧಿಕ ಜನರ ಪೈಕಿ ಆದಾಯ ತೆರಿಗೆ ಪಾವತಿಸುವವರು ಅಂದಾಜು 2.24 ಕೋಟಿ (ಶೇ.1.6) ಮಂದಿ ಮಾತ್ರ.

| ಜಗದೀಶ ಬುರ್ಲಬಡ್ಡಿ

ಆದಾಯ ತೆರಿಗೆದಾರರಿಗೆ 2023-24 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು 2023ರ 31 ಜುಲೈ ಕೊನೆಯ ದಿನವಾಗಿತ್ತು. ಹಣಕಾಸು ಸಚಿವಾಲಯದ ಪ್ರಕಾರ 2023ರ ಜುಲೈ 31ರವರೆಗೆ 2023-24 ಹಣಕಾಸು ವರ್ಷಕ್ಕೆ ಸಲ್ಲಿಸಿದ ಒಟ್ಟು ಐಟಿಆರ್​ಗಳ ಸಂಖ್ಯೆ 6.77 ಕೋಟಿಗೂ ಅಧಿಕ. 2022ರಲ್ಲಿ ಇದೇ ದಿನದವರೆಗೆ 2022-23ರ ಹಣಕಾಸು ವರ್ಷಕ್ಕೆ ಸಲ್ಲಿಸಿದ 5.83 ಕೋಟಿ ಐಟಿಆರ್​ಗಳಿಗಿಂತ ಶೇಕಡಾ 16.1ರಷ್ಟು ಹೆಚ್ಚಳ ಇದಾಗಿದೆ.

ದಂಡ ಪಾವತಿಸುವ ಮೂಲಕ ಡಿ. 31ರವರೆಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅವಕಾಶ ಇರುವುದರಿಂದ ಐಟಿಆರ್ ಸಲ್ಲಿಸುವವರ ಸಂಖ್ಯೆ ಈ ಹಣಕಾಸು ವರ್ಷದಲ್ಲಿ ಇನ್ನಷ್ಟು ಹೆಚ್ಚಳವಾಗಲಿದೆ. 2023ರ ಜುಲೈ 31ರ ಸಂಜೆ 5 ರಿಂದ 6ರ ನಡುವಿನ ಒಂದು ಗಂಟೆಯಲ್ಲಿ 4,96,559

ಐಟಿಆರ್ ಫೈಲಿಂಗ್ ಆಗಿರುವುದು ಇ-ಫೈಲಿಂಗ್ ಪೋರ್ಟಲ್​ನಲ್ಲಿ ದಾಖಲಾಗಿದೆ. ಈ ಸಾಲಿನಲ್ಲಿ ಮೊದಲ ಬಾರಿಗೆ ಐಟಿಆರ್ ಫೈಲ್ ಮಾಡಿರುವವರ ಸಂಖ್ಯೆ 53.67 ಲಕ್ಷ ಆಗಿದ್ದು, ತೆರಿಗೆ ವ್ಯಾಪ್ತಿ ವಿಸ್ತರಿಸುತ್ತಿರುವುದರ ಸಂಕೇತ ಇದೆಂದು ಪರಿಗಣಿಸಬಹುದಾಗಿದೆ.

ಕಳೆದ ಬಜೆಟ್ ಅಧಿವೇಶನದಲ್ಲಿ ಲೋಕಸಭೆ ಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ, ಹಣಕಾಸು ಸಚಿವಾಲಯವು ಕಳೆದ ನಾಲ್ಕು ವರ್ಷಗಳಲ್ಲಿ, ಅಂದರೆ, 2019-20 ರಿಂದ 2022-23 ರವರೆಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ವ್ಯಕ್ತಿಗಳ ಸಂಖ್ಯೆಯ ಮಾಹಿತಿಯನ್ನು ನೀಡಿದೆ. 2022-23 ಹಣಕಾಸು ವರ್ಷದಲ್ಲಿ 7.4 ಕೋಟಿ ಜನರು ಐಟಿ ರಿಟನ್ಸ್ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ ಆದಾಯ ತೆರಿಗೆ ಪಾವತಿಸದವರ ಸಂಖ್ಯೆಯೇ ಶೇಕಡಾ 70ರಷ್ಟು ಇದೆ. ಅಂದರೆ, ಐಟಿಆರ್ ಸಲ್ಲಿಸಿದ್ದರೂ ಶೂನ್ಯ ತೆರಿಗೆ ಪಾವತಿಸಿದವರ ಸಂಖ್ಯೆಯೇ ಅಧಿಕ. 2019-20 ರಿಂದ 2022-23 ರವರೆಗಿನ ಈ ನಾಲ್ಕು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದವರ ಸಂಖ್ಯೆ 6.48 ಕೋಟಿಯಿಂದ 7.4 ಕೋಟಿಗೆ ಏರಿದೆ. ಆದರೆ, ಈ ಪೈಕಿ ಶೂನ್ಯ ತೆರಿಗೆ ಇರುವವರ ಸಂಖ್ಯೆ 2019-20 ರಲ್ಲಿ 2.9 ಕೋಟಿಗಳಿಂದ 2022-23 ರಲ್ಲಿ 5.16 ಕೋಟಿಗಳಿಗೆ ಹೆಚ್ಚಾಗಿದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಐಟಿಆರ್ ಸಲ್ಲಿಸಿದವರ ಸಂಖ್ಯೆ ಶೇಕಡಾ 14.2ರಷ್ಟು ಹೆಚ್ಚಿದ್ದರೆ, ಈ ಪೈಕಿ ಶೂನ್ಯ ತೆರಿಗೆ ಪಾವತಿಸುವ ಜನರ ಸಂಖ್ಯೆ ಶೇಕಡಾ 63ರಷ್ಟು ಹೆಚ್ಚಾಗಿದೆ. ಸರಳವಾಗಿ ಹೇಳುವುದಾದರೆ, ಐಟಿಆರ್ ಸಲ್ಲಿಸುವ ಜನರ ಸಂಖ್ಯೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದರೂ, ಹೆಚ್ಚಿನ ಜನರು ಶೂನ್ಯತೆರಿಗೆ ಪಾವತಿಸಿರುವುದರಿಂದ ವಾಸ್ತವವಾಗಿ ತೆರಿಗೆ ಪಾವತಿಸುವ ಜನರ ಸಂಖ್ಯೆಯಲ್ಲಿ ಅಷ್ಟೇನೂ ಹೆಚ್ಚಳವಾಗಿಲ್ಲ. ಐಟಿಆರ್ ಸಲ್ಲಿಸಿದ ಒಟ್ಟು ಜನರಲ್ಲಿ ಶೂನ್ಯ ತೆರಿಗೆ ಇರುವ ವ್ಯಕ್ತಿಗಳ ಪಾಲು 2019-20 ರಲ್ಲಿ ಶೇಕಡಾ 45 ಆಗಿತ್ತು. 2022-23ರಲ್ಲಿ ಇದು ಶೇಕಡಾ 70ಕ್ಕೆ ಮುಟ್ಟಿತು. 2022-23ರಲ್ಲಿ ಐಟಿಆರ್ ಸಲ್ಲಿಸಿದ 7.4 ಕೋಟಿ ಜನರಲ್ಲಿ 5.16 ಕೋಟಿ ಜನರು ಶೂನ್ಯ ತೆರಿಗೆ ಇರುವವರೇ ಆಗಿದ್ದಾರೆ. 2019-20 ರಲ್ಲಿ 3.58 ಕೋಟಿ ಜನರು ಆದಾಯ ತೆರಿಗೆ ಪಾವತಿಸಿದ್ದರೆ, 2022-23 ರಲ್ಲಿ ಈ ಸಂಖ್ಯೆ ಕೇವಲ 2.24 ಕೋಟಿ. 2000-2001 ಹಣಕಾಸು ವರ್ಷದಲ್ಲಿ ಒಟ್ಟು ತೆರಿಗೆ ಸಂಗ್ರಹಗಳಲ್ಲಿ ನೇರ ತೆರಿಗೆಯ (ಆದಾಯ ತೆರಿಗೆ) ಪಾಲು ಶೇಕಡಾ 36 ರಷ್ಟಿತ್ತು, ಇದು 2022-23ರಲ್ಲಿ ಶೇಕಡಾ 55 ಕ್ಕೆ ಏರಿದೆ. ಒಟ್ಟು ಸಂಗ್ರಹಗಳಲ್ಲಿ ನೇರ ತೆರಿಗೆಯ ಪಾಲು 2007-08ರಲ್ಲಿ ಪರೋಕ್ಷ ತೆರಿಗೆ ಸಂಗ್ರಹವನ್ನು ಮೀರಿಸಿತು. ಇದಾದ ನಂತರದ ವರ್ಷಗಳಲ್ಲಿ, 2016-17 ಮತ್ತು 2020-21ರ ಹಣಕಾಸು ವರ್ಷಗಳನ್ನು ಹೊರತುಪಡಿಸಿ, ಪರೋಕ್ಷ ತೆರಿಗೆಗಳಿಗಿಂತ ನೇರ ತೆರಿಗೆಗಳ ಸಂಗ್ರಹವೇ ಹೆಚ್ಚಿನ ಪ್ರಮಾಣದಲ್ಲಿದೆ.

ರದ್ದತಿಯ ಅನುಕೂಲಗಳೇನು?

ಭಾರತದಲ್ಲಿ ತೆರಿಗೆ ವಂಚನೆ ವ್ಯಾಪಕ ಪ್ರಮಾಣದಲ್ಲಿ ಮುಂದುವರಿದಿದೆ. ಇದನ್ನು ತಡೆಯಬೇಕಾದರೆ ಸರ್ಕಾರವು ಪರೋಕ್ಷ ತೆರಿಗೆಗಳನ್ನು ಸರಳೀಕರಿಸಬೇಕು ಮತ್ತು ಆದಾಯ ತೆರಿಗೆಯನ್ನು ರದ್ದುಗೊಳಿಸಬೇಕು ಎಂಬುದು ಕೆಲ ಆರ್ಥಿಕ ತಜ್ಞರ ಸಲಹೆಯಾಗಿದೆ. ಆದಾಯ ತೆರಿಗೆ ತೆಗೆದುಹಾಕುವುದರಲ್ಲಿ ಅನೇಕ ಲಾಭದಾಯಕ ಸಂಗತಿಗಳಿವೆ. ಆದಾಯ ತೆರಿಗೆ ಇಲ್ಲ ಎಂದರೆ ಹೆಚ್ಚು ಖರ್ಚು ಮಾಡುವ ಶಕ್ತಿ, ಹೆಚ್ಚು ಬೇಡಿಕೆ, ಹೆಚ್ಚು ಉತ್ಪಾದನೆ, ಹೆಚ್ಚಿನ ಉದ್ಯೋಗಗಳು. ಈ ಮೂಲಕ ಆರ್ಥಿಕತೆಯು ಸಾಕಷ್ಟು ವಿಸ್ತರಿಸುವುದರೊಂದಿಗೆ ಪರೋಕ್ಷ ತೆರಿಗೆಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ಸಾಧ್ಯತೆಗಳನ್ನು ತೆರೆಯುತ್ತದೆ. ಆದಾಯ ತೆರಿಗೆ ಇಲ್ಲದಿದ್ದರೆ ತೆರಿಗೆ ವಂಚಿಸುವ ಅಗತ್ಯ ಉಂಟಾಗುವುದಿಲ್ಲ. ಪರೋಕ್ಷ ತೆರಿಗೆಗಳ ಮೂಲಕ ಎಲ್ಲರೂ ತೆರಿಗೆ ಪಾವತಿಸು ವಂತಾಗುತ್ತದೆ. ಈ ಹಿಂದೆ ಕೇಂದ್ರ ಸಚಿವರಾಗಿದ್ದ ಡಾ. ಸುಬ್ರಮಣ್ಯ ಸ್ವಾಮಿ ಅವರು ವರಮಾನ ತೆರಿಗೆ ರದ್ದತಿಯನ್ನು ಬೆಂಬಲಿಸಿದ್ದಾರೆ.

21 ವರ್ಷಗಳಲ್ಲಿ 21 ಪಟ್ಟು!

2000 - 01ರಲ್ಲಿ 68,305 ಕೋಟಿ ರೂಪಾಯಿ ಆದಾಯ ತೆರಿಗೆ ಸಂಗ್ರಹವಾಗಿತ್ತು. 2021-22ರಲ್ಲಿ ಈ ಮೊತ್ತ 14,12,422 ಕೋಟಿ ರೂಪಾಯಿಗೆ ಏರಿದೆ. 21 ವರ್ಷಗಳಲ್ಲಿ ಅಂದಾಜು 21 ಪಟ್ಟು ಹೆಚ್ಚಾಗಿದೆ. 2001ರಲ್ಲಿ ಆದಾಯ ತೆರಿಗೆ ಬೇಸಿಕ್ ಎಕ್ಸೆಂಪ್ಶನ್ 50 ಸಾವಿರ ರೂ. ಇತ್ತು (ಮೂಲ ವಿನಾಯಿತಿ. ಅಂದರೆ, 50 ಸಾವಿರ ರೂ.ವರೆಗೆ ತೆರಿಗೆ ವಿನಾಯಿತಿ ಇತ್ತು.). 2021-22ರ ಹಣಕಾಸು ವರ್ಷದಲ್ಲಿ ವರ ಮಾನ ತೆರಿಗೆ ವಿನಾಯಿತಿ ಮಿತಿಯು 2.5 ಲಕ್ಷ ರೂ.ಗೆ ಏರಿಕೆಯಾಗಿದೆ. ಆದಾಯ ತೆರಿಗೆ ಸಂಗ್ರಹದಲ್ಲಿ 21 ಪಟ್ಟು ಹೆಚ್ಚಳವಾಗಿದ್ದರೂ ತೆರಿಗೆ ವಿನಾಯಿತಿಯು ಮಾತ್ರ 5 ಪಟ್ಟು ಏರಿಕೆ ಕಂಡಿದೆ.

ಎಷ್ಟು ನ್ಯಾಯ ಸಮ್ಮತ?

2022-23 ರಲ್ಲಿ ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 1.6 ರಷ್ಟು ಮಂದಿ ಮಾತ್ರ ಆದಾಯ ತೆರಿಗೆ ಪಾವತಿಸಿದ್ದಾರೆ. ಈ ಸಾಲಿನಲ್ಲಿ ನೇರ ತೆರಿಗೆಯಾದ ಆದಾಯ ತೆರಿಗೆಯು 16.61 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದ್ದರೆ, ಇತರ ಪರೋಕ್ಷ ತೆರಿಗೆಗಳ ಮೊತ್ತ 13.82 ಲಕ್ಷ ಕೋಟಿ ರೂಪಾಯಿ ಇದೆ. ದೇಶದ ಒಟ್ಟು ತೆರಿಗೆ ಸಂಗ್ರಹದಲ್ಲಿ ಆದಾಯದ ತೆರಿಗೆ ಪಾಲು ಶೇಕಡಾ 55ರಷ್ಟು ಆಗುತ್ತದೆ. ಕೇವಲ ಶೇ. 1.6ರಷ್ಟು ಜನರು ಈ ಶೇಕಡಾ 55ರಷ್ಟು ತೆರಿಗೆಯನ್ನು ಪಾವತಿಸುವುದು ಎಷ್ಟು ನ್ಯಾಯಯುತ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಅಲ್ಲದೆ, ಈ ಶೇಕಡಾ 1.6ರಷ್ಟು ಜನರು ಪರೋಕ್ಷ ತೆರಿಗೆಯನ್ನು ಕೂಡ ಸಾಂರ್ದಭಿಕವಾಗಿ ಪಾವತಿಸುವವರೇ ಆಗಿದ್ದಾರೆ ಎಂಬುದು ಗಮನಾರ್ಹವಾಗಿದೆ.

ಎಷ್ಟು ತರ್ಕಬದ್ಧ?

ಹೊಸದಾಗಿ ವ್ಯಾಪಾರ ಆರಂಭಿಸಿದ ವಿನಯ ಎಂಬಾತ ಒಂದು ಹಣಕಾಸು ವರ್ಷದಲ್ಲಿ ಸಾಕಷ್ಟು ಲಾಭ ಗಳಿಸಿದ. ಸರಿಯಾಗಿ ಲೆಕ್ಕವನ್ನೊಪ್ಪಿಸಿ 2 ಲಕ್ಷ ರೂಪಾಯಿ ಆದಾಯ ತೆರಿಗೆ ಪಾವತಿಸಿದ. ಆದರೆ, ಮರುವರ್ಷವೇ ಆತನಿಗೆ ವ್ಯಾಪಾರದಲ್ಲಿ 10 ಲಕ್ಷ ರೂಪಾಯಿ ನಷ್ಟವಾಯಿತು. ಇನ್ನು ಆಕಾಶ ಎಂಬಾತ ದೊಡ್ಡ ಸಂಬಳದ ಉದ್ಯೋಗದಲ್ಲಿದ್ದು, ಪ್ರತಿ ವರ್ಷ 2-3 ಲಕ್ಷ ರೂಪಾಯಿ ತೆರಿಗೆ ಪಾವತಿಸುತ್ತಿದ್ದ. ಆತ ಈಗ ಉದ್ಯೋಗ ಕಳೆದುಕೊಂಡಿದ್ದು, ಬೇರಾವ ನೌಕರಿಯೂ ದೊರೆತಿಲ್ಲ. ಹೆಚ್ಚು ಲಾಭ ಗಳಿಸಿದಷ್ಟು ಹೆಚ್ಚೆಚ್ಚು ಆದಾಯ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸುವ ವ್ಯವಸ್ಥೆ ಭಾರತದಲ್ಲಿದೆ. ಆದರೆ, ಹೆಚ್ಚೆಚ್ಚು ನಷ್ಟವುಂಟಾಗಿ ಇಲ್ಲವೇ ಉದ್ಯೋಗವಿಲ್ಲದೆ ಆದಾಯ ಕುಸಿದಾಗ ಸರ್ಕಾರ ನೆರವಿಗೆ ಧಾವಿಸುವುದಿಲ್ಲ ಅಥವಾ ಆದಾಯ ತೆರಿಗೆ ಪಾವತಿಯನ್ನು ಮರಳಿಸುವುದಿಲ್ಲ. ಹೀಗಾಗಿರುವಾಗ ಹೆಚ್ಚು ಆದಾಯ ಗಳಿಸುವುದಕ್ಕೆ ಹೆಚ್ಚಿನ ತೆರಿಗೆ ವಿಧಿಸುವುದು ಎಷ್ಟು ತರ್ಕಬದ್ಧ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net