

ಬೆಂಗಳೂರು: ಚಿತ್ರದುರ್ಗ ಹೆದ್ದಾರಿಯಲ್ಲಿ 37 ಸಾವು ಸಂಭವಿಸಿರುವ ಕುರಿತು ಟ್ರಾಫಿಕ್ ಆ್ಯಂಡ್ ರೋಡ್ ಸೇಫ್ಟಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಲ್ಲದೆ, ವಾಹನ ಸವಾರರಿಗೆ ಕಿವಿಮಾತನ್ನೂ ಹೇಳಿದ್ದಾರೆ.
'ಕರಾಳ ಶನಿವಾರ.. ಇಂದು ಬೆಳಗಿನ ಜಾವ ಚಿತ್ರದುರ್ಗ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಸಾವಿಗೀಡಾದ ಐವರು ಸೇರಿದಂತೆ 37 ಮಂದಿ ಸಾವಿಗೀಡಾಗಿದ್ದಾರೆ. ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು' ಎಂದು ಅವರು ಮಾಹಿತಿ ತಿಳಿಸಿದ್ದಾರೆ.
ಈ ಹೆದ್ದಾರಿಯಲ್ಲಿ ಸಾವಿಗೀಡಾದವರ ಪೈಕಿ ಹೆಚ್ಚಿನವರು ದ್ವಿಚಕ್ರ ವಾಹನ ಸವಾರರು. ಅನನುಭವಿ ಚಾಲಕರು ರಾತ್ರಿ ವಾಹನ ಚಲಾಯಿಸುವುದನ್ನು ತಪ್ಪಿಸಬೇಕು ಹಾಗೂ ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಧರಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಆದರೆ 37 ಸಾವು ಒಂದೇ ದಿನದಲ್ಲಿ ಸಂಭವಿಸಿದ್ದಾ ಅಥವಾ ಇದುವರೆಗೆ ಎಷ್ಟು ಅವಧಿಯಲ್ಲಿ ಸಂಭವಿಸಿದ್ದು ಎನ್ನುವ ಕುರಿತು ಅವರ ಟ್ವೀಟ್ನಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ಗೊಂದಲ ಮೂಡಿರುವುದರಿಂದ ನೆಟ್ಟಿಗರು ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸುವಂತೆ ಅವರಿಗೆ ರಿಪ್ಲೈ ಮೂಲಕ ಮನವಿ ಮಾಡಿಕೊಂಡಿದ್ದಾರೆ.