ಒಂದೇ ನೊಂದಣಿ ಸಂಖ್ಯೆಯ ಹಲವು ಬಸ್​​ಗಳು - ಹೊರರಾಜ್ಯಗಳ 6 ಖಾಸಗಿ ಬಸ್ ಆರ್​ಟಿಒ ಬಲೆಗೆ

rto bus siez
Published on

ರಾಜಧಾನಿ ಪ್ರವೇಶಿಸದೆ ತೆರಿಗೆ ವಂಚನೆ! ರಾಜಸ್ಥಾನದ ಜೋಧಪುರ-ಬೆಂಗಳೂರು ಸಂಚರಿಸುವ ಆರ್​ಜೆ-19 ಪಿಸಿ 3131 ಸ್ಲೀಪರ್ ಕೋಚ್ ಬಸ್ ನ.18ರಂದು ದಾಬಸ್​ಪೇಟೆ-ನೆಲಮಂಗಲ ನಡುವಿನ ಡಾಬಾ ಬಳಿ ನಿಂತಿತ್ತು. ಅದನ್ನು ಗಮನಿಸಿದ ಆರ್​ಟಿಒ ಅಧಿಕಾರಿಗಳು ನೋಂದಣಿ ಸಂಖ್ಯೆ ಪರಿಶೀಲನೆ ನಡೆಸಿದಾಗ, ಅ.31ಕ್ಕೆ ಬಸ್​ನ ರಹದಾರಿ ಮತ್ತು ತೆರಿಗೆ ಪಾವತಿ ಅವಧಿ ಮುಗಿದಿರುವುದು ಕಂಡು ಬಂದಿದೆ. ಅಲ್ಲದೆ, ವಾರ್ಷಿಕ 6.4 ಲಕ್ಷ ತೆರಿಗೆ ಪಾವತಿಸುವ ಬದಲು ತ್ರೈಮಾಸಿಕ ತೆರಿಗೆ ಕಟ್ಟಿರುವುದಾಗಿ ದಾಖಲೆ ಸೃಷ್ಟಿಸಲಾಗಿತ್ತು. ಬೆಂಗಳೂರಿನ ಒಳಗೆ ಪ್ರವೇಶಿಸಿದರೆ ಆರ್​ಟಿಒಗೆ ಸಿಕ್ಕಿಬೀಳುವ ಭಯದಿಂದ ಹೊರವಲಯದಲ್ಲೇ ನಿಲುಗಡೆ ಮಾಡಿ, ಪ್ರಯಾಣಿಕರನ್ನು ನಗರದ ಒಳಗಿಂದ ಬೇರೆ ವಾಹನದಲ್ಲಿ ಕರೆಸಿಕೊಂಡು ನಂತರ ಈ ಬಸ್​ನಲ್ಲಿ ಜೋಧಪುರಕ್ಕೆ ಕರೆದೊಯ್ಯುಲಾಗುತ್ತಿತ್ತು.

ನೆಲಮಂಗಲ : ಸಾರಿಗೆ ಇಲಾಖೆಗೆ ಲಕ್ಷಾಂತರ ರೂ. ತೆರಿಗೆ ವಂಚಿಸಿ ಕಳ್ಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೊರರಾಜ್ಯಗಳ 6 ಖಾಸಗಿ ಬಸ್​ಗಳನ್ನು ಆರ್​ಟಿಒ ಅಧಿಕಾರಿಗಳು ಪತ್ತೆಮಾಡಿ ಒಟ್ಟು 41 ಲಕ್ಷ ರೂ. ದಂಡ ವಿಧಿಸಿದ್ದಾರೆ. ಒಂದೇ ನೋಂದಣಿ ಫಲಕವನ್ನು ಹಲವು ಬಸ್​ಗಳಿಗೆ ಅಳವಡಿಸಿಕೊಂಡು ಓಡಾಡುತ್ತಿದ್ದವು. ನಗರ ಪ್ರವೇಶಿಸಿದರೆ ತೆರಿಗೆ ವಂಚನೆ ಬಯಲಾಗುತ್ತದೆಂದು ನಗರದ ಹೊರವಲಯದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದವು.

ಖಾಸಗಿ ಬಸ್ ಮಾಲೀಕರ ಕಳ್ಳಾಟ ಹಾಗೂ ಅವುಗಳನ್ನು ಹಿಡಿಯಲು ಆರ್​ಟಿಒ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ಕುರಿತು ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜಪ್ತಿ ಮಾಡಿರುವ ಬಸ್​ಗಳ ಚಾಸ್ಸಿ ನಂಬರ್ ಹಾಗೂ ಬಸ್ ನೋಂದಣಿ ನಂಬರ್​ಗಳಲ್ಲೂ ವ್ಯತ್ಯಾಸ ಕಂಡು ಬಂದಿದ್ದು, ಅಸಲಿ ಮಾಲೀಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸಾರಿಗೆ ಇಲಾಖೆ ಜಂಟಿ ಆಯುಕ್ತರಾದ ಕೆ.ಟಿ.ಹಾಲಸ್ವಾಮಿ ಹಾಗೂ ಓಂಕಾರೇಶ್ವರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ, ಹಿರಿಯ ಮೋಟಾರು ನಿರೀಕ್ಷಕರಾದ ಎಚ್.ರಾಜಣ್ಣ, ಎಂ.ಎನ್.ಸುಧಾಕರ್, ಡಾ.ಡಿ.ಎಸ್.ಒಡೆಯರ್, ಕೃಷ್ಣಾನಂದ್, ಶಿವಪ್ರಸಾದ್ ಮತ್ತಿತರರು ಕಾರ್ಯಾಚರಣೆ ತಂಡದಲ್ಲಿದ್ದರು.

ಒಂದೇ ಸಂಖ್ಯೆಯ ಹಲವು ಬಸ್ : ಜೋಧಪುರ ಬಸ್ ಜಪ್ತಿ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳಿಗೆ ಆನಂದ್ ಟ್ರಾನ್ಸ್ ಲಿಂಕ್ ಹೆಸರಿನ ಎನ್​ಎಲ್01 ಬಿ 1794 ನೋಂದಣಿ ಸಂಖ್ಯೆಯ ಬಸ್ ಕಣ್ಣಿಗೆ ಬಿದ್ದಿತ್ತು. ಆದರೆ, ಅದೇ ನೋಂದಣಿಯ ಬಸ್ ತೆರಿಗೆ ಪಾವತಿಸದ ಕಾರಣಕ್ಕೆ ಈ ಮೊದಲೇ ಜಪ್ತಿಯಾಗಿತ್ತು. ಆದರೆ, ಆ ನೋಂದಣಿ ಸಂಖ್ಯೆಯ ಫಲಕವನ್ನೇ ಬಳಸಿ ಇನ್ನೊಂದು ಬಸ್ ಸಂಚರಿಸುತ್ತಿರುವ ವಿಚಾರ ತಿಳಿದ ಅಧಿಕಾರಿಗಳು, ಹೊಸೂರು ರಸ್ತೆ ಡೇರಿ ವೃತ್ತದ ಬಳಿ ಇನ್ನೊಂದು ಬಸ್ ಜಪ್ತಿ ಮಾಡಿದ್ದಾರೆ. ನಂತರ ಎನ್​ಎಲ್ 01 ಬಿ 1797 ಹಾಗೂ ಎನ್​ಎಲ್ 01 ಬಿ 1795 ಬಸ್​ಗಳನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ತೆರಿಗೆ ಕಟ್ಟದೆ ಓಡಾಡುತ್ತಿದ್ದ ಜಿಜೆ 03 ಬಿವಿ 9015 ಸಂಖ್ಯೆಯ ಬಸ್ಸನ್ನೂ ಜಪ್ತಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net