ತಾಳಗುಪ್ಪ ಪಿಎಚ್‌ಸಿ ವೈದ್ಯೆಗೆ ಕಾರ್ಯದೊತ್ತಡ

tgp hospital
ಶಿಥಿಲಾವಸ್ಥೆಯಲ್ಲಿರುವ ವಸತಿಗೃಹ.
Published on

ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ 24್ಡ7 ಆಸ್ಪತ್ರೆ. ಆದರೆ ಇಲ್ಲಿ ಸಾಕಷ್ಟು ಸೌಲಭ್ಯಗಳ ಕೊರತೆಯಿದೆ. ಇಲ್ಲಿ ಆಸ್ಪತ್ರೆ ಇದ್ದರೂ ಅಪಘಾತ ಸೇರಿ ಅನೇಕ ತುರ್ತು ಚಿಕಿತ್ಸೆಗೆ ಸಾಗರ ಆಸ್ಪತ್ರೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿಯಿದೆ.

ವೈದ್ಯರ ಕೊರತೆಯಿಂದಾಗಿ ರಜೆ ದಿನಗಳಂದು ಹಾಗೂ ಸಂಜೆ 5 ಗಂಟೆ ನಂತರ ಇಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ಸುಸಜ್ಜಿತ ಆಸ್ಪತ್ರೆ ಇದೆ. ಮೂವರು ಗ್ರೂಪ್ ಡಿ ನೌಕರರಿದ್ದಾರೆ. ಮೂವರು ನರ್ಸ್‌ಗಳಿದ್ದಾರೆ. ಆಂಬುಲೆನ್ಸ್ ಇದೆ. ಎರಡು ಪಾಳಿಯ ವಾಹನ ಚಾಲಕರಿದ್ದಾರೆ. ಆದರೆ ವೈದ್ಯರ ಕೊರತೆಯಿದೆ. ಒಬ್ಬರೇ ವೈದ್ಯರಿರುವ ಕಾರಣ ಕೇವಲ 12 ತಾಸು ಮಾತ್ರ ಸೇವೆ ದೊರೆಯುತ್ತಿದೆ.

ವೈದ್ಯಾಧಿಕಾರಿ ಡಾ. ಕಾವ್ಯಾ ಅವರು ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಉತ್ತಮ ಸೇವೆ ಸಲ್ಲಿಸುತ್ತಿದ್ದರೂ ಸುಸಜ್ಜಿತ ವಸತಿಗೃಹ ಇಲ್ಲದ ಕಾರಣ ಅವರೂ ಕೂಡ ದೂರದಿಂದ ಕೆಲಸಕ್ಕೆ ಬರುವಂತಾಗಿದೆ.

ದುಸ್ಥಿತಿಯಲ್ಲಿ ಕಟ್ಟಡ: ಸಿಬ್ಬಂದಿ ವಾಸಿಸುವ ಮನೆಗಳು ಮಳೆಗಾಲದಲ್ಲಿ ಸೋರುತ್ತವೆ. ತಲವಾಟ, ಆಲಳ್ಳಿ, ಹಿರೇಮನೆ, ಹಂಸಗಾರುಗಳಲ್ಲಿ ಉಪಕೇಂದ್ರಗಳಿವೆ. ಅಲ್ಲಿ ಪ್ರಾಥಮಿಕ ವೈದ್ಯಕೀಯ ಸೇವೆ ಲಭ್ಯವಿದೆ. ತಲವಾಟ ಕೇಂದ್ರದಲ್ಲಿ ಕ್ವಾರ್ಟರ್ಸ್‌ ದುಸ್ಥಿತಿಯಲ್ಲಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಪ್ರತಿ ಶನಿವಾರ ಸಂತೆ ನಡೆಯುತ್ತದೆ. ಇದರ ನಡುವೆಯೇ ಆಸ್ಪತ್ರೆ ಇರುವುದರಿಂದ ಸಂತೆ ದಿನ ಆಸ್ಪತ್ರೆಗೆ ಹೋಗಲು ಅಡ್ಡಿಯಾಗುತ್ತಿದೆ. ಸಂತೆ ಸ್ಥಳ ಬದಲಾವಣೆ ವಿಷಯ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಂತೆ ತ್ಯಾಜ್ಯವನ್ನು ಆಸ್ಪತ್ರೆ ಪಕ್ಕದಲ್ಲಿಯೇ ಹಾಕುವುದರಿಂದ ವಾತವರಣ ಕಲುಷಿತಗೊಂಡಿದೆ.

ತಾಳಗುಪ್ಪ ಹೋಬಳಿಯ 10 ಕಿ.ಮೀ ವ್ಯಾಪ್ತಿ ಈ ಆಸ್ಪತ್ರೆಗೆ ಬರುತ್ತದೆಯಾದರೂ ಉತ್ತರ ಕನ್ನಡ ಜಿಲ್ಲೆಯ ಹಲವು ಹಳ್ಳಿಗಳು ಭಾವನಾತ್ಮಕವಾಗಿ ಇಲ್ಲಿಗೆ ಜೋಡಣೆ ಆಗಿರುವುದರಿಂದ ಹಸುವಂತೆ ಸೇರಿ ಮುಂತಾದ ಹಳ್ಳಿಗಳ ಜನರು ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ರೋಗಿಗಳಿಗೆ ಏಕೈಕ ವೈದ್ಯರೇ ಚಿಕಿತ್ಸೆ ನೀಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net