

ಪಣಜಿ: ತೆಹಲ್ಕಾ ಮ್ಯಾಗಜಿನ್ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ವಿರುದ್ಧ ಕೇಳಿಬಂದಿದ್ದ ಅತ್ಯಾಚಾರ ಆರೋಪದಿಂದ ಗೋವಾ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
ಸಹೋದ್ಯೋಗಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಗೋವಾ ಸೆಷನ್ಸ್ ಕೋರ್ಟ್ ಮೇ 21ಕ್ಕೆ ತೀರ್ಪು ಕಾಯ್ದಿರಿಸಿತ್ತು. ಸದ್ಯ ತೇಜ್ಪಾಲ್ ಜಾಮೀನಿನ ಮೇಲೆ ಹೊರಗಿದ್ದು, ಖುಲಾಸೆ ಆದೇಶದಿಂದ ಖುಷಿಪಟ್ಟಿದ್ದಾರೆ.
2013ರಲ್ಲಿ ಗೋವಾದ ಪಂಚತಾರಾ ರೆಸಾರ್ಟ್ನಲ್ಲಿ ನಡೆದ ಸಮ್ಮೇಳನದ ಸಮಯದಲ್ಲಿ ತಮ್ಮ ಮ್ಯಾಗಜಿನ್ನ ಕಿರಿಯ ಸಹೋದ್ಯೋಗಿ ಮೇಲೆ ಲಿಫ್ಟ್ನಲ್ಲಿ ಅತ್ಯಾಚಾರ ಎಸಗಿದ್ದ ಆರೋಪ ತೇಜ್ಪಾಲ್ ಮೇಲಿತ್ತು.
ತೇಜ್ಪಾಲ್ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ ನ್ಯಾಯಾಲಯ ತೇಜ್ಪಾಲ್ರನ್ನು ಬಂಧಿಸುವಂತೆ ಆದೇಶಿಸಿತ್ತು. ಈ ಪ್ರಕರಣದ ವಿರುದ್ಧ ತೇಜ್ ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆಗಸ್ಟ್ ನಲ್ಲಿ ಈ ಪ್ರಕರಣದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ತೇಜ್ ಪಾಲ್ ಅರ್ಜಿ ವಜಾಗೊಳಿಸಿ, ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅಲ್ಲದೆ ಆರು ತಿಂಗಳೊಳಗೆ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸುವಂತೆ ಗೋವಾ ಕೋರ್ಟ್ ಗೆ ಸೂಚಿಸಿತ್ತು.