

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸಕ್ಕೆ ಎರಡು ದಿನ ಮುನ್ನವೇ ಚಿತ್ರದುರ್ಗದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಸಮಾವೇಶದ ಮೂಲಕ ಬಿಜೆಪಿಯ 2023ರ ವಿಧಾನಸಭಾ ಚುನಾವಣಾ ತಾಲೀಮಿಗೆ ಚಾಲನೆ ದೊರೆತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗ್ರಾಮ ವಿಕಾಸದ ಪಾಠ ಹೇಳುತ್ತಲೇ ಪಂಚಾಯ್ತಿ ಮಟ್ಟದಲ್ಲಿ ಕಮಲ ಅರಳಿಸುವ ಟಾರ್ಗೆಟ್ ನೀಡಿದರೆ, ಸಿಎಂ ಬಸವರಾಜ ಬೊಮ್ಮಾಯಿ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ಹೆಚ್ಚಳ ಘೋಷಣೆ ಮೂಲಕ ಹುರುಪು ತುಂಬಿದ್ದಾರೆ.
ಗ್ರಾಮಾಭಿವೃದ್ಧಿ ನಿಮ್ಮ ಕೈಯಲ್ಲಿ: ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನದ ಲೆಕ್ಕ ಕೊಡುವ ಜತೆಗೆ ದೇಶಕ್ಕೆ ಪ್ರಧಾನಿ ಮೋದಿ ಕೈಗೊಂಡ ಕ್ರಮಗಳನ್ನು ಎಳೆಎಳೆಯಾಗಿ ನಡ್ಡಾ ಬಿಡಿಸಿಟ್ಟರು. ಹಳ್ಳಿಯ ಅಭಿವೃದ್ಧಿಯನ್ನು ಬೆಂಗಳೂರಿನಲ್ಲಿ ಕುಳಿತ ಅಥವಾ ಜಿಲ್ಲಾ ಕೇಂದ್ರದ ಅಧಿಕಾರಿಗಳು ಬಂದು ಮಾಡಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿಗಳು ಸಮಗ್ರ ಯೋಜನೆ ರೂಪಿಸಿ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಜೆ.ಪಿ. ನಡ್ಡಾ ಸಲಹೆ ನೀಡಿದರು.
15 -20 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಗಳಿಗೆ ಬರುತ್ತಿದ್ದ ಅನುದಾನ ಲಕ್ಷದ ಪ್ರಮಾಣದಲ್ಲಿತ್ತು. ಈಗ ಅದು ಕೋಟಿಗಳ ಮಟ್ಟಕ್ಕೇರಿದೆ. ಪ್ರತಿ ವ್ಯಕ್ತಿಗೆ ಸರ್ಕಾರ ಮಾಡುವ ವೆಚ್ಚದ ಮೊತ್ತ 54 ರೂ.ಗಳಿಂದ 650 ರೂ.ಗಳಿಗೆ ಏರಿದೆ. ಮೊದಲು ದೆಹಲಿಯಿಂದ ಹೊರಟ ಅನುದಾನ ನೌಕರರ ಸಂಬಳ, ಇತರೆ ಖರ್ಚುಗಳಿಗೆ ಬಳಕೆಯಾಗಿ ಉಳಿದದ್ದು ಗ್ರಾಮ ಪಂಚಾಯಿತಿಗಳಿಗೆ ತಲುಪುತ್ತಿತ್ತು. ಮೋದಿ ಸರ್ಕಾರದಲ್ಲಿ ಹಣ ನೇರವಾಗಿ ಗ್ರಾಮಪಂಚಾಯಿತಿಗಳಿಗೆ ಬರುತ್ತಿದ್ದು, ಅಭಿವೃದ್ಧಿಗೆ ಹೆಚ್ಚಿನ ಅವಕಾಶ ದೊರೆತಿದೆ. ಎಲ್ಲ ನಾಗರಿಕರನ್ನು ಸಾಮಾಜಿಕ ಸುರಕ್ಷಾ ಯೋಜನೆಯಡಿ ತರಬೇಕಿದೆ ಎಂದರು. ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಗಳಲ್ಲಿ ಅರ್ಹರ ಹೆಸರು ದಾಖಲಿಸುವುದು ಗ್ರಾಪಂ ಸದಸ್ಯರ ಜವಾಬ್ದಾರಿ ಎಂದು ಹೇಳಿದರು.
ಕಾಂಗ್ರೆಸ್ ದಿವಾಳಿ: ದೇಶದಲ್ಲಿ ಕಾಂಗ್ರೆಸ್ ಬೌದ್ಧಿಕವಾಗಿ, ರಾಜಕೀಯವಾಗಿ, ಸಂಘಟನಾತ್ಮಕವಾಗಿ ದಿವಾಳಿ ಆಗಿದೆ. ಅಧಿಕಾರದ ಆಸೆಗೆ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಬೊಮ್ಮಾಯಿ ಕಿಡಿಕಾರಿದರು. ಜನತೆ ಶಾಂತಿ, ನೆಮ್ಮದಿಯಿಂದ ಇರುವುದು ಕಾಂಗ್ರೆಸ್ಗೆ ಬೇಕಿಲ್ಲ. ಸಣ್ಣ, ಸಣ್ಣ ವಿಷಯಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಕ್ಷೋಭೆ ಸೃಷ್ಟಿಸುತ್ತಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬ ಸತ್ಯ ಗೊತ್ತಿದ್ದರೂ ಗಾಂಧಿ ಕುಟುಂಬವನ್ನು ರಕ್ಷಿಸಲು ಕಾಂಗ್ರೆಸಿಗರು ಕಾನೂನನ್ನು ಕಡೆಗಣಿಸುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಖಾತೆಗಳಿಗೆ ಕಿತ್ತಾಡುತ್ತಿದ್ದಾರೆ. 2023ಕ್ಕೆ ಕರ್ನಾಟಕದಲ್ಲೂ ಕಾಂಗ್ರೆಸ್ ಹಡಗು ಮುಳುಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಅಗ್ನಿಪಥ ಕ್ರಾಂತಿಕಾರಿ ಹೆಜ್ಜೆ: ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ಜತೆಗೆ ಅಗ್ನಿಪಥ ಯೋಜನೆಯ ಸರಿಯಾದ ಮಾಹಿತಿಯನ್ನು ಗ್ರಾಮಗಳ ಯುವಜನರಿಗೆ ಒದಗಿಸುವ ಜವಾಬ್ದಾರಿ ಚುನಾಯಿತ ಪ್ರತಿನಿಧಿಗಳ ಮೇಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಕೇಂದ್ರ ಸರ್ಕಾರ ಘೊಷಿಸಿರುವ ‘ಅಗ್ನಿಪಥ’ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ವಿಶ್ವದಲ್ಲಿ ಭಾರತದ ಸೇನೆಗೆ ಇನ್ನೂ ಉಚ್ಚ ಸ್ಥಾನ ಕೊಡಿಸಲಿದೆ. ಆದರೆ, ಯೋಜನೆಯನ್ನು ತಪ್ಪಾಗಿ ಅರ್ಥೈಸಿ ಯುವಜನರ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಕೆಲವು ಶಕ್ತಿಗಳು ನಮ್ಮ ದೇಶದಲ್ಲಿ ಪರಿವರ್ತನೆಯ ವಿರುದ್ಧವಾಗಿವೆ. ಯುವ ಜನರ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು ದೇಶಸೇವೆ ಮಾಡುವುದು ಅವರಿಗೆ ಬೇಕಿಲ್ಲ ಎಂದು ಟೀಕಿಸಿದರು.
ಯುವಕರು ವಿರೋಧ ಮಾಡುವ ಮುನ್ನ ಯೋಜನೆಯ ಪೂರ್ಣ ವಿವರವನ್ನು ತಿಳಿದುಕೊಳ್ಳಬೇಕು. ಅಪಪ್ರಚಾರಗಳಿಗೆ ಕಿವಿಕೊಡಬಾರದು. ಬಿಜೆಪಿ ಸರ್ಕಾರ ಯುವಜನರ, ದೇಶ ರಕ್ಷಣೆಗೆ ಯಾವಾಗಲೂ ಬದ್ಧವಾಗಿದೆ. ಈ ಸಂದೇಶವನ್ನು ಗ್ರಾಮದಲ್ಲಿನ ಯುವಜನರಿಗೆ ಪಕ್ಷದ ಕಾರ್ಯಕರ್ತರು ಮನವರಿಕೆ ಮಾಡಿಸಬೇಕು ಎಂದು ಸಲಹೆ ನೀಡಿದರು.
14 ಮತ್ತು 15ನೇ ಹಣಕಾಸು ಯೋಜನೆಗಳ ಮೂಲಕ ಪ್ರಧಾನಿ, ಗ್ರಾಪಂ.ಗಳ ಸಬಲೀಕರಣಕ್ಕೆ ಒತ್ತು ಕೊಟ್ಟಿದ್ದಾರೆ. ಪ್ರತಿಹಳ್ಳಿಯೂ ಡಿಜಿಟಲೀಕರಣ ಆಗಬೇಕೆಂಬ ಮಹತ್ವಾಕಾಂಕ್ಷೆ ಅವರದ್ದು, ಅದಕ್ಕಾಗಿ ಗ್ರಾಮೀಣ ಪ್ರದೇಶಕ್ಕೂ ಇಂಟರ್ನೆಟ್ ಸೌಕರ್ಯವನ್ನು ಒದಗಿಸಲು ಕೇಂದ್ರ ಆದ್ಯತೆ ನೀಡುತ್ತಿದೆ. ಯಾವ ಪ್ರಧಾನಿಯೂ ಮಾಡದಷ್ಟು ಕೆಲಸವನ್ನು ನರೇಂದ್ರ ಮೋದಿ ಎಂಟು ವರ್ಷಗಳಲ್ಲಿ ಮಾಡಿದ್ದಾರೆ. | ಜೆ.ಪಿ.ನಡ್ಡಾ ಬಿಜೆಪಿ ಅಧ್ಯಕ್ಷ
ಇಂದಿನ ನಿಮ್ಮ ಉತ್ಸಾಹ ನೋಡಿದರೆ 2023 ರಲ್ಲಿ ರಾಜ್ಯದಲ್ಲಿ ಮತ್ತೆ ಕಮಲ ಅರಳುವ ವಿಶ್ವಾಸ ಮೂಡುತ್ತಿದೆ ಎಂದ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು. ವಿದೇಶಿ ಹೂಡಿಕೆಯಲ್ಲಿ ರಾಜ್ಯ ದೇಶದಲ್ಲಿ ನಂ.1 ಸ್ಥಾನದಲ್ಲಿದೆ. ಕೃಷಿಯ ಕೆಲವು ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕದ ಮೊತ್ತ 4 ಬಿಲಿಯನ್, ಕಾಫಿ ರಫ್ತು ಒಂದು ಶತಕೋಟಿ ಡಾಲರ್ಗೆ ಏರಿಕೆಯಾಗಿದೆ. ಅಮೃತ ಗ್ರಾಮ ಯೋಜನೆ, ಬಯಲು ಶೌಚಮುಕ್ತಿ, ಜಲಜೀವನ ಯೋಜನೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ಉಜ್ವಲಾ, ಆಯುಷ್ಮಾನ್ ಭಾರತ್, ಗರೀಬ್ ಕಲ್ಯಾಣ ಅನ್ನಯೋಜನೆ, ಕಿಸಾನ್ ಸಮ್ಮಾನ್ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸದಸ್ಯರಿಗೆ ಸಿಹಿಸುದ್ದಿ: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನ ಹೆಚ್ಚಿಸುವ ಬೇಡಿಕೆ ಸರ್ಕಾರದ ಎದುರಿಗಿದ್ದು ಶೀಘ್ರವೇ ಸಿಹಿ ಸುದ್ದಿ ಕೊಡುವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು. ಪಂಚಾಯಿತಿಗಳ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಲಕ್ಷ್ಯ ನೆಟ್ಟಂತಿದ್ದ ಸಿಎಂ ಅನುದಾನದ ಆಶ್ವಾಸನೆ ಕೊಡಲು ಹಿಂದೇಟು ಹಾಕಲಿಲ್ಲ. ಆಗಸ್ಟ್ 15ರಂದು ಸ್ವಾತಂತ್ರ್ಯೊತ್ಸವ ಅಮೃತ ಮಹೋತ್ಸವದ ನೆನಪಿಗೆ 1,500 ಗ್ರಾಪಂ.ಗಳಿಗೆ ತಲಾ 2 ಕೋಟಿ ರೂ. ಘೊಷಿಸಿದ್ದೆ. ಈಗ ಹೊಸದಾಗಿ ಇನ್ನೂ 500 ಹೊಸ ಗ್ರಾಪಂ.ಗಳಿಗೆ ಈ ಅನುದಾನ ನೀಡಲಾಗುವುದು ಎಂದು ಪ್ರಕಟಿಸಿದರು. ಮಾಜಿ ಸಿಎಂ ಬಿಎಸ್ವೈ ಮಾರ್ಗದರ್ಶನದಲ್ಲಿ ಸರ್ಕಾರ ಮುನ್ನಡೆಸುತ್ತಿರುವೆ ಎಂದು ಮಾತಿಗಿಳಿದ ಬೊಮ್ಮಾಯಿ ಸಾಧನೆಗಳನ್ನು ಪಟ್ಟಿ ಮಾಡುತ್ತ ಹೋದರು. ರೈತರ ಮಕ್ಕಳಿಗೆ ವಿದ್ಯಾನಿಧಿ, ಎಸ್ಸಿ, ಎಸ್ಟಿ ಸಮುದಾಯದ ಮನೆಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್, ಡೀಸೆಲ್ಗೆ 600 ಕೋಟಿ ರೂ., ಒಂದೂವರೆ ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದ ಮಾಹಿತಿ ನೀಡಿದರು. ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡುವಂತೆ ಪ್ರತಿನಿಧಿಗಳಿಗೆ ಮನವಿ ಮಾಡಿದರು.