ಕಂದಾಯ ಸಂಗ್ರಹಣೆಯಲ್ಲಿ ಗುರಿ ಸಾಧನೆ

sor r
ಸೊರಬ ತಾಲೂಕಿನ ತತ್ತೂರು ಗ್ರಾಪಂ ವ್ಯಾಪ್ತಿಯ ಕಂದಾಯ ವಸೂಲಾತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು, ಸಿಬ್ಬಂದಿ.
Published on

ಸೊರಬ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಂದಾಯ ವಸೂಲಾತಿ ಅಭಿಯಾನ ತಂಡದ ಪರಿಶ್ರಮದ ಲವಾಗಿ ತಾಲೂಕಿನಲ್ಲಿ ನೂರರಷ್ಟು ಸಾಧನೆ ಆಗಿರುವುದು ವಿಶೇಷ. ಕಡ್ಡಾಯವಾಗಿ ಕಂದಾಯ ವಸೂಲಾತಿಗೆ ಕ್ರಮ ಕೈಗೊಂಡಿದ್ದರಿಂದ ತಾಲೂಕಿನಲ್ಲಿ ಚಾಲ್ತಿ ಕಂದಾಯ ಶೇ.100ರಷ್ಟು ಹಾಗೂ ಹಳೆಯ ಬಾಕಿ ಶೇ.50ರಷ್ಟು ವಸೂಲಾಗಿದೆ.

ಜಿಪಂ ಸಿಇಒ ಹೇಮಂತ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಯೋಜನಾಧಿಕಾರಿ, ತಾಲೂಕು ನೋಡಲ್ ಅಧಿಕಾರಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಒಳಗೊಂಡ ಪಿಡಿಒಗಳ ತಂಡ ವಾರದಲ್ಲಿ ಒಂದು ದಿನ ತೆರಿಗೆ ವಸೂಲಾತಿ ಮಾಡುವುದು ಮತ್ತು ಜಾಗೃತಿ ಜಾಥಾ ಆಯೋಜಿಸಿ ತೆರಿಗೆ ವಸೂಲಾತಿಗೆ ಮುಂದಾಗಿತ್ತು. ಇದರಿಂದಾಗಿ ಚಾಲ್ತಿ ಕಂದಾಯ ವಸೂಲಾತಿಯಲ್ಲಿ ಶೇ.100ರಷ್ಟು ಸಾಧನೆ ಮಾಡಿದ ತಾಲೂಕುಗಳ ಪೈಕಿ ಸೊರಬ ಸಹ ಒಂದು.

ಸೊರಬ ತಾಲೂಕಿನಲ್ಲಿ ತೆರಿಗೆ ಸಂಗ್ರಹ ಗುರಿ 3.26 ಕೋಟಿ ರೂ. ಇದೆ. ಚಾಲ್ತಿ ಮತ್ತು ಹಳೆಯ ಬಾಕಿ ಸೇರಿ 3.58 ಕೋಟಿ ರೂ. ತೆರಿಗೆ ಸಂಗ್ರಹ ಸಂಗ್ರಹಮಾಡುವ ಮೂಲಕ ರಾಜ್ಯದಲ್ಲಿ ಹತ್ತನೇ ಸ್ಥಾನದಲ್ಲಿದೆ. ತಾಲೂಕಿನ 35 ಗ್ರಾಪಂಗಳಲ್ಲಿ 29 ಗ್ರಾಪಂ ಪ್ರತಿಶತ ನೂರರಷ್ಟು ಸಾಧನೆ ಮಾಡಿವೆ. ಮೂಡಿ, ದೊಡ್ಡಿಕೊಪ್ಪ, ಬಿಳವಾಣಿ, ಗೆಂಡ್ಲ, ತಲಗಡ್ಡೆ, ಹುರಳಿ, ಹೆಚ್ಚೆ ಗ್ರಾಪಂಗಳು ಸಾಧನೆಯ ಹಾದಿಯಲ್ಲಿವೆ.

ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ನಿವೇಶನ, ಖಾಲಿ ನಿವೇಶನ, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ವ್ಯಾಪಾರ, ಕಟ್ಟಡ, ಬಿಎಸ್‌ಎನ್‌ಎಲ್ ಟವರ್ ಸೇರಿ ಹಲವಾರು ಬಾಬ್ತುಗಳಿಂದ ಕರ ವಸೂಲಿ ಮಾಡಲು ಅವಕಾಶವಿದೆ. ತಾಲೂಕಿನಲ್ಲಿ ಅಂಗಡಿ ಮುಂಗಟ್ಟು ಹಾಗೂ ವಾಣಿಜ್ಯ ವ್ಯಾಪಾರಗಳಿಂದ ತೆರಿಗೆ ವಸೂಲು ಮಾಡಲಾಗುತ್ತಿದೆ. ಅಲ್ಲದೆ ಬಿಎಸ್‌ಎನ್‌ಎಲ್ ಟವರ್‌ಗಳ ತೆರಿಗೆ ನೀಡದಿರುವುದರಿಂದ ಗ್ರಾಪಂಗಳಿಗೆ ನಷ್ಟದ ಹೊರೆ ತಗ್ಗುತ್ತಿಲ್ಲ. ಅಲ್ಲದೆ ಖಾಸಗಿ ನೆಟ್‌ವರ್ಕ್ ಟವರ್ ಹೊಂದಿದವರು ನಿಗದಿತ ಸಮಯಕ್ಕೆ ತೆರಿಗೆ ಪಾವತಿಸಬೇಕು.

ಶೇ.10ರಷ್ಟು ರಿಯಾಯಿತಿ: ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜೂನ್ ಅಂತ್ಯದೊಳಗೆ ಕಂದಾಯ ಪಾವತಿಸಿದರೆ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ತಾಪಂ ಇಒ ಡಾ. ಪ್ರದೀಪ್‌ಕುಮಾರ್, ಜಿಲ್ಲಾ ಯೋಜನಾಧಿಕಾರಿ, ತಾಲೂಕು ನೋಡಲ್ ಅಧಿಕಾರಿ ಹಾಗೂ ಗ್ರಾಪಂ ಸಿಬ್ಬಂದಿ ಶ್ರಮವಹಿಸಿರುವುದು ಸಾಧನೆಗೆ ಮತ್ತಷ್ಟು ಶಕ್ತಿ ನೀಡಿದೆ. ಈ ಮೂಲಕ ತೆರಿಗೆ ಸಂಗ್ರಹಣೆಯಲ್ಲಿ ಸೊರಬ ತಾಪಂ ಗಮನಾರ್ಹ ಸಾಧನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net