

ಕಡಿವಾಣಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳು
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ನಗರದ ಸಮೀಪವಿರುವ ಕೆರೆ ಏರಿಗಳು ಕೋಳಿತ್ಯಾಜ್ಯ ವಿಲೇವಾರಿಯ ತಾಣವಾಗಿ ಮಾರ್ಪಟ್ಟಿವೆ. ನಗರದ ಕೆಲ ಕೋಳಿ ಮಾಂಸದ ಅಂಗಡಿಗಳ ಮಾಲೀಕರು ಕೆರೆ ಏರಿ ಬದಿಯಲ್ಲಿ ಬೇಕಾಬಿಟ್ಟಿಯಾಗಿ ಕೋಳಿತ್ಯಾಜ್ಯ ಬಿಸಾಡುತ್ತಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಅಲ್ಲದೆ, ಕೆರೆ ಅಂಗಳ ದುರ್ನಾಥ ಬೀರುವಂತಾಗಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲವಾಗಿದ್ದಾರೆ.
ನಗರ ಪ್ರದೇಶದಿಂದ ಕೂಗಳತೆ ದೂರದಲ್ಲಿರುವ ಕೂಡ್ಲೂರು ಕೆರೆ, ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆ ಜತೆಗೆ, ನಗರ ಪ್ರದೇಶದಲ್ಲಿರುವ ಶೆಟ್ಟಿಹಳ್ಳಿ ಕೆರೆ ಹಾಗೂ ಕುಡಿಯುವ ನೀರಿನ ಕಟ್ಟೆ ಸೇರಿ ಹಲವು ಕೆರೆ ಏರಿ ಬಳಿ ರಾತ್ರೋರಾತ್ರಿ ಕೋಳಿ ತ್ಯಾಜ್ಯ ಬೀಳುತ್ತಿದೆ. ತ್ಯಾಜ್ಯವನ್ನು ಮೂಟೆಕಟ್ಟಿ ವಾಹನಗಳಲ್ಲಿ ತುಂಬಿಕೊಂಡು ಬಂದು ಬಿಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ಕೆರೆ ಏರಿಗಳ ವಾತಾವರಣ ಕಲುಷಿತಗೊಳ್ಳುತ್ತಿರುವ ಜತೆಗೆ ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಪ್ರಯಾಣಿಕರ ಮೇಲೆ ಎರಗುವ ನಾಯಿಗಳು:
ಕೋಳಿತ್ಯಾಜ್ಯ ತಿನ್ನಲು ನಾಯಿಗಳು ಗುಂಪುಗೂಡುತ್ತಿದ್ದು, ಈ ಭಾಗದಲ್ಲಿ ಸಂಚರಿಸುವ ಬೈಕ್ ಸವಾರರ ಮೇಲೆ ನಾಯಿಗಳು ಎರಗುವುದರಿಂದ ಸವಾರರು ಬಿದ್ದು ಗಾಯಗೊಂಡಿರುವ ಹಲವು ನಿದರ್ಶನಗಳಿವೆ. ಗಾಳಿಗೆ ಹಾರಿ ಬರುವ ಕೋಳಿ ಪುಕ್ಕಗಳು ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಜತೆಗೆ ಸೊಳ್ಳೆ, ನೊಣ ಮತ್ತಿತರ ಕ್ರಿಮಿ ಕೀಟಗಳು ಹೆಚ್ಚುತ್ತಿದ್ದು, ಕೆರೆಯ ಕೆಳಗಿನ ಗದ್ದೆಗಳಲ್ಲಿನ ಬೇಸಾಯಕ್ಕೂ ಸಮಸ್ಯೆಯಾಗಿದೆ.
ನೋಟಿಸ್‌ಗೂ ಡೋಂಟ್ ಕೇರ್
ಎಲ್ಲೆಂದರಲ್ಲಿ ಕೋಳಿ ತ್ಯಾಜ್ಯ ಎಸೆಯದಂತೆ ನಗರಸಭೆ ವ್ಯಾಪ್ತಿಯ ಕೋಳಿ ಅಂಗಡಿಗಳ ಮಾಲೀಕರಿಗೆ ನಗರಸಭೆ ಅಧಿಕಾರಿಗಳು ಈ ಹಿಂದೆಯೇ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಮಾಲೀಕರು ಡೊಂಟ್‌ಕೇರ್ ಎನ್ನುತ್ತಿದ್ದಾರೆ. ಅಂಗಡಿಯಲ್ಲಿನ ತ್ಯಾಜ್ಯ ಎಲ್ಲಿ ಬಿಸಾಡುತ್ತಿರಿ ಎಂದು ನಗರಸಭೆ ಕೇಳದಿರುವುದರಿಂದ ಕೆರೆ ಅಂಗಳ ಕೋಳಿತ್ಯಾಜ್ಯ ವಿಲೇವಾರಿ ಹಾಟ್‌ಸ್ಪಾಟ್ ಆಗಲು ಕಾರಣವಾಗಿದೆ. ಕೋಳಿ ತ್ಯಾಜ್ಯವನ್ನು ಹಲವು ವರ್ಷಗಳಿಂದ ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸಲು ನಗರಸಭೆ ಜತೆಗೆ ಈ ಕೆರೆಗಳ ವ್ಯಾಪ್ತಿಯ ಗ್ರಾಪಂಗಳು ಕೂಡ ವಿಫಲವಾಗಿವೆ.
ಕಡಿವಾಣಕ್ಕೆ ಸಿಸಿ ಕ್ಯಾಮಾರಾ
ಈ ಹಿಂದೆ ನಗರಸಭೆ ವತಿಯಿಂದಲೇ ತ್ಯಾಜ್ಯ ಸಂಗ್ರಹಿಸುವ ಕಾರ್ಯಕ್ರಮ ರೂಪಿಸಲಾಗಿತ್ತು. ಆದರೆ, ಅದು ಕೂಡ ಕಾರ್ಯಗತವಾಗಿಲ್ಲ. ಇನ್ನು ಈ ಕೆರೆಗಳ ವ್ಯಾಪ್ತಿಯ ಗ್ರಾಪಂಗಳು ಕೂಡ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿವೆ. ಈ ಹಿಂದೆ ಹೊಂಗನೂರು ಕೆರೆ ಏರಿ ಮೇಲೆ ಹೆಚ್ಚಾಗಿ ತ್ಯಾಜ್ಯ ಎಸೆಯಲಾಗುತ್ತಿತ್ತು. ಗ್ರಾಪಂ ವತಿಯಿಂದ ಈ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ ಬಳಿಕ ಇದು ಕೊಂಚ ನಿಯಂತ್ರಣಗೊಂಡಿದೆ. ಉಳಿದ ಕಡೆ ಇದೇ ರೀತಿ ಕ್ರಮಕೈಗೊಂಡರೆ ತ್ಯಾಜ್ಯ ಸಮಸ್ಯೆಗೆ ಕಡಿವಾಣ ಹಾಕಬಹುದಾಗಿದೆ.
ಕಸ ವಿಲೇವಾರಿಯೂ ಇಲ್ಲಿಯೇ
ತಾಲೂಕಿನ ಹಲವು ಕೆರೆಗಳ ಏರಿಗಳು ಕಸದ ಹಾಟ್‌ಸ್ಪಾಟ್ ಆಗಿ ಬದಲಾಗಿವೆ. ನಗರದ ಕೂದಲೆಳೆ ಅಂತರದಲ್ಲಿರುವ ರಾಮಮ್ಮನ ಕೆರೆ ಏರಿ ಮೇಲಂತೂ ಯಥೇಚ್ಛವಾಗಿ ಕಸ ಸುರಿಯಲಾಗುತ್ತಿದೆ. ಇದಕ್ಕೆ ಕುಡಿನೀರು ಕಟ್ಟೆ ಹಾಗೂ ಶೆಟ್ಟಿಹಳ್ಳಿ ಕೆರೆಯೂ ಹೊರತಲ್ಲ. ಈ ಕೆರೆಗಳ ಬಳಿ ಹಸಿ ಹಾಗೂ ಒಣಕಸ ಬೇಕಾಬಿಟ್ಟಿಯಾಗಿ ತಂದು ಸುರಿಯಲಾಗುತ್ತಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ.
ಟಿ.ಎಲ್.ರಾಜು, ಸಾರ್ವಜನಿಕ