ಡಿಎಂಕೆ ಸಂಸದೆ ಕನಿಮೋಳಿ ಪ್ರಯಾಣ: ಖಾಸಗಿ ಬಸ್​ ಮಹಿಳಾ ಚಾಲಕಿಯನ್ನು ಕೆಲಸದಿಂದ ತೆಗೆದ ಮಾಲೀಕ!

TN Woman Bus Driver
Published on

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪ್ರಥಮ ಮಹಿಳಾ ಬಸ್ ಚಾಲಕಿ ಎಂಬ ಹೆಗ್ಗಳಿಕೆ ಹೊಂದಿದ್ದ ಶರ್ಮಿಳಾ, ಇದೀಗ ಕೆಲವೇ ತಿಂಗಳಲ್ಲಿ ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಪರೋಕ್ಷವಾಗಿ ಡಿಎಂಕೆ ಸಂಸದೆ ಕನಿಮೋಳಿ ಅವರು ಕಾರಣವಾಗಿದ್ದು, ಈ ವಿಚಾರ ಇದೀಗ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಖ್ಯಾತಿ ಪಡೆಯಲು ಅಥವಾ ಪ್ರಚಾರಕ್ಕಾಗಿ ಸೆಲೆಬ್ರಿಟಿಗಳನ್ನು ಬಸ್​ಗೆ ಆಹ್ವಾನಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬಸ್​ ಮಾಲೀಕ 23 ವರ್ಷದ ಶರ್ಮಿಳಾರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.

ಅಭಿನಂದನೆ

ಡಿಎಂಕೆ ಸಂಸದೆ ಮತ್ತು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಕನಿಮೋಳಿ ಅವರು ಶುಕ್ರವಾರ (ಜೂ. 22) ಗಾಂಧಿಪುರಂನಿಂದ ಪೀಲಮೇಡುವಿಗೆ ಶರ್ಮಿಳಾ ಚಾಲಕಿಯಾಗಿದ್ದ ಖಾಸಗಿ ಬಸ್​ನಲ್ಲಿ ಪ್ರಯಾಣಿಸಿದರು. ಅಲ್ಲದೆ, ಶರ್ಮಿಳಾರ ಚಾಲನಾ ಕೌಶಲ್ಯವನ್ನು ಮೆಚ್ಚಿ ಅವರನ್ನು ಅಭಿನಂದಿಸಿದರು.

ಪ್ರಯಾಣದ ವೇಳೆ ಬಸ್​ನಲ್ಲಿ ಮಹಿಳಾ ಕಂಡಕ್ಟರ್​, ಕನಿಮೋಳಿ ಅವರೊಂದಿಗೆ ಅಸಭ್ಯವಾಗಿ ಮಾತನಾಡಿದ್ದರ ಬಗ್ಗೆ ಬಸ್​ ಮಾಲೀಕರಿಗೆ ದೂರು ನೀಡಲು ಶರ್ಮಿಳಾ ಹೋದಾಗ, ಮಾಲೀಕರು ಅವರನ್ನೇ ಕೆಲಸದಿಂದ ತೆಗೆದು ಹಾಕಿದ್ದಾರೆ.

ಪ್ರಚಾರಕ್ಕಾಗಿ ಸೆಲೆಬ್ರಿಟಿಗಳನ್ನು ಕರೆತರುತ್ತಿದ್ದೀಯಾ ಎಂದು ಆರೋಪಿಸಿ ಮಾಲೀಕ ಕೆಲಸದಿಂದ ತೆಗೆದು ಹಾಕಿದರು ಎಂದು ಶರ್ಮಿಳಾ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲದೆ, ಮಾಲೀಕನ ಮ್ಯಾನೇಜರ್​, ನನ್ನ ತಂದೆಯ ಜತೆ ತುಂಬಾ ಕೆಟ್ಟದಾಗಿ ಮಾತನಾಡಿದರು ಎಂದು ಶರ್ಮಿಳಾ ಆರೋಪ ಮಾಡಿದ್ದಾರೆ.

ಆದರೆ, ಶರ್ಮಿಳಾರನ್ನು ಕೆಲಸದಿಂದ ತೆಗೆದು ಹಾಕಿರುವ ವಿಷಯವನ್ನು ಬಸ್​ ಮಾಲೀಕ ನಿರಾಕರಿಸಿದ್ದಾರೆ.

ಉತ್ತಮ ಸಂದೇಶ

ಶರ್ಮಿಳಾ ಚಲಾಯಿಸಿದ ಬಸ್‌ ಪ್ರಯಾಣದ ಅನುಭವದ ಬಗ್ಗೆ ಮಾತನಾಡಿದ ಕನ್ನಿಮೋಳಿ, ಸಾಮಾನ್ಯವಾಗಿ, ನಾವು ಮಹಿಳೆಯರು ಮತ್ತು ಪುರುಷರು ಸಮಾನರು ಎಂದು ಹೇಳಿದಾಗ, ಮಹಿಳೆ ಬಸ್ ಅಥವಾ ಲಾರಿ ಓಡಿಸಬಲ್ಲರೇ ಎಂದು ಮಹಿಳೆಯರ ಸಾಮರ್ಥ್ಯದ ಬಗ್ಗೆ ಕೇಳುತ್ತಾರೆ. ಇಂದು ಮಹಿಳೆಯೊಬ್ಬರು ಬಸ್ ಓಡಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದು ತುಂಬಾ ಸಂತೋಷದ ವಿಷಯ ಮತ್ತು ಇತರ ಮಹಿಳೆಯರಿಗೆ, ಯಾವುದೇ ಕೆಲಸವನ್ನು ಮಾಡಬಹುದು ಎಂಬ ಸಂದೇಶವನ್ನು ರವಾನಿಸಿದಂತಿದೆ. ಈ ಹಿಂದೆ ನಾನು ಶರ್ಮಿಳಾರೊಂದಿಗೆ ಫೋನ್‌ನಲ್ಲಿ ಮಾತನಾಡಿದಾಗ, ಕೊಯಮತ್ತೂರಿಗೆ ಬಂದಾಗಲೆಲ್ಲ ಅವರ ಬಸ್‌ನಲ್ಲಿ ಪ್ರಯಾಣಿಸಲು ಕೇಳಿದಳು. ಅದಕ್ಕಾಗಿಯೇ, ಈಗ ನಾನು ಇಲ್ಲಿದ್ದೇನೆ ಮತ್ತು ಅವಳೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದೆ ಎಂದು ಕನಿಮೋಳಿ ಸುದ್ದಿಗಾರರಿಗೆ ತಿಳಿಸಿದರು.

ನನಗೂ ಗಿಫ್ಟ್ ಕೊಟ್ಟಿದ್ದಾರೆ

ಶರ್ಮಿಳಾ ಕೂಡ ಸಂತಸ ವ್ಯಕ್ತಪಡಿಸಿದ್ದು, ಕನಿಮೋಳಿ ಮೇಡಂ ಅವರು ಬಸ್‌ನಲ್ಲಿದ್ದಾಗ ಅವರೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಬಸ್ ಪೀಳಮೇಡುವಿನಲ್ಲಿ ನಿಂತಿತು. ಈ ವೇಳೆ ಅವರು ನನ್ನೊಂದಿಗೆ ಮಾತನಾಡಿದರು. ಅವರು ನನ್ನನ್ನು ತಬ್ಬಿಕೊಂಡರು ಮತ್ತು ಬೆಂಬಲದ ಭರವಸೆ ನೀಡಿದರು. ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಅನಿಸುತ್ತಿದೆ. ನನಗೂ ಗಿಫ್ಟ್ ಕೊಟ್ಟಿದ್ದಾರೆ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಕೊಯಮತ್ತೂರು (ದಕ್ಷಿಣ) ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಕೂಡ ಶರ್ಮಿಳಾ ಓಡಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net