

ವಾಷಿಂಗ್ಟನ್: ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಡಿದ ಬಳಿಕ ಪ್ರಧಾನಿ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ಎಲ್ಲರ ಗಮನ ಸೆಳೆದಿದೆ.
ಪ್ರಧಾನಿ ಮೋದಿ ಅವರ ನಾಲ್ಕು ದಿನಗಳ ಅಮೆರಿಕ ಪ್ರವಾಸದ ಸಮಾರೋಪ ಸಮಾರಂಭ ಕಾರ್ಯಾಕ್ರಮ ಈ ಭಾವುಕತೆಗೆ ಸಾಕ್ಷಿಯಾಯಿತು.
ವಾಷಿಂಗ್ಟನ್ ಡಿಸಿಯಲ್ಲಿರುವ ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ ಮತ್ತು ರೆನಾಲ್ಡ್ ರೇಗಾನ್ ಬಿಲ್ಡಿಂಗ್ನಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯುನಿಟಿ ಫೌಂಡೇಶನ್ (ಯುಎಸ್ಐಸಿಎಫ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹ್ವಾನದ ಮೇರೆಗೆ 38 ವರ್ಷದ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆಯನ್ನು ಹಾಡಿದರು.
ಮಿಲ್ಬೆನ್ ಅವರು ಆಫ್ರಿಕನ್-ಅಮೆರಿಕನ್ ನಟಿ ಮತ್ತು ಗಾಯಕಿ ಆಗಿದ್ದಾರೆ. ರಾಷ್ಟ್ರಗೀತೆ ಜನ ಗಣ ಮನ ಮತ್ತು ಓಂ ಜೈ ಜಗದೀಶ ಹರೆ ಹಾಡನ್ನು ಹಾಡುವ ಮೂಲಕ ಭಾರತದಲ್ಲೂ ತುಂಬಾ ಖ್ಯಾತಿ ಪಡೆದಿದ್ದಾರೆ. ಅಮೆರಿಕದ ರಾಷ್ಟ್ರಗೀತೆ ಮತ್ತು ದೇಶಭಕ್ತಿಯ ಸಂಗೀತವನ್ನು ಸತತ ನಾಲ್ಕು ಅಮೆರಿಕ ಅಧ್ಯಕ್ಷರ ಎದುರು ಹಾಡಿರುವ ನನಗೆ ಪ್ರಧಾನಿ ಮೋದಿ ಅವರು ಎದುರು ಭಾರತದ ರಾಷ್ಟ್ರಗೀತೆ ಹಾಡಲು ಅವಕಾಶ ದೊರೆತಿದ್ದು, ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ.
ಅಮೆರಿಕನ್ ಮತ್ತು ಭಾರತೀಯ ಗೀತೆಗಳು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಆದರ್ಶಗಳನ್ನು ಹೇಳುತ್ತವೆ. ಇದು ಯುಎಸ್-ಭಾರತದ ಸಂಬಂಧದ ನಿಜವಾದ ಸಾರವಾಗಿದೆ. ಸ್ವತಂತ್ರ ರಾಷ್ಟ್ರವನ್ನು ಸ್ವತಂತ್ರ ಜನರಿಂದ ಮಾತ್ರ ವ್ಯಾಖ್ಯಾನಿಸಲಾಗುತ್ತದೆ ಎಂದು ಮಿಲ್ಬೆನ್ ಹೇಳಿದರು.
ಕಳೆದ ತಿಂಗಳು, ಪಿಎಂ ಮೋದಿ ಅವರು ಪಪುವಾ ನ್ಯೂಗಿನಿಯಾ ರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಪೆಸಿಫಿಕ್ ದ್ವೀಪ ರಾಷ್ಟ್ರದ ಪ್ರಧಾನಿ, ಗೌರವ ಸೂಚಕವಾಗಿ ಪ್ರಧಾನಿ ಮೋದಿಯವರ ಪಾದಗಳನ್ನು ಸ್ಪರ್ಶಿಸಿದ್ದರು. ಇದೀಗ ಖ್ಯಾತ ಗಾಯಕಿ ಮೋದಿ ಕಾಲನ್ನು ಮುಟ್ಟಿ ನಮಸ್ಕರಿಸಿರುವು ಪ್ರಧಾನಿಗಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. (ಏಜೆನ್ಸೀಸ್)