

ಬೆಂಗಳೂರು: ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ, ಪ್ರಾಣ ಉಳಿಸುವ ಮೂಲಕ ಬೆಂಗಳೂರು ಪೊಲೀಸರು ಕರ್ತವ್ಯ ಪ್ರಜ್ಞೆ ಜತೆಗೆ ಮಾನವೀಯತೆಯನ್ನು ಮೆರೆದಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ನಿಖಿತಾ (28) ಎಂಬಾಕೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಪತಿ ದಿವಾಕರ್ ಜತೆ ನಿಖಿತಾ ಬೈಕ್ನಲ್ಲಿ ತೆರಳುತ್ತಿದ್ದಳು. ಈ ವೇಳೆ ಬೈಕ್ ನಿಲ್ಲಿಸಿ ನಡುರಸ್ತೆಯಲ್ಲೇ ಪತ್ನಿಗೆ ಐದು ಬಾರಿ ಚಾಕು ಇರಿದಿದ್ದ. ಈ ದೃಶ್ಯ ಸಿಟಿಟಿವಿಯಲ್ಲೂ ದಾಖಲಾಗಿದೆ. ದಿವಾಕರ್ ಚಾಕುವಿನಿಂದ ಚುಚ್ಚುವುದನ್ನು ನೋಡಿದ ಬೈಕ್ ಸವಾರನೊಬ್ಬ ಹೆದರಿ ಅಲ್ಲಿಂದ ಪರಾರಿಯಾದ ದೃಶ್ಯವು ವಿಡಿಯೋದಲ್ಲಿದೆ.
ಚಾಕು ಇರಿತಕ್ಕೆ ಒಳಗಾಗಿ, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ನಿಖಿತಾರನ್ನು ಬಾಣಸವಾಡಿ ಠಾಣೆಯ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ್ದಲ್ಲದೆ, ತ್ರೀವ ರಕ್ತಸ್ರಾವ ಹಿನ್ನಲೆಯಲ್ಲಿ ಬಾಣಸವಾಡಿ ಠಾಣಾ ಇನ್ಸ್ಪೆಕ್ಟರ್ ಸಂತೋಷ್ ಅವರು ನಾಲ್ಕು ಬಾಟಲಿ ರಕ್ತದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
ಸಂತ್ರಸ್ತೆ ನಿಖಿತಾ ಮತ್ತು ದಿವಾಕರ್ ಪರಸ್ಪರ ಪ್ರೀತಿಸಿ 5 ವರ್ಷ ಹಿಂದೆ ಮದುವೆಯಾಗಿದ್ದರು. ಈ ಮದುವೆಗೆ ನಿಖಿತಾ ಮನೆಯವರು ಒಪ್ಪಿರಲಿಲ್ಲ. ವಿರೋಧದ ನಡುವೆಯೂ ದಿವಾಕರ್ನನ್ನು ನಿಖಿತಾ ವರಿಸಿದ್ದಳು. ಈ ಕಾರಣದಿಂದ ಪಾಲಕರಿಂದ ಆಕೆ ದೂರವಾಗಿದ್ದಳು. ಪ್ರೀತಿಗಾಗಿ ಹೆತ್ತ ತಂದೆ-ತಾಯಿಯನ್ನೇ ತೊರೆದು ಬಂದ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳದ ದಿವಾಕರ್, ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ.
ಮದ್ಯಪಾನ ಬೀಡಿಸಲು ದಿವಾಕರ್ನನ್ನು ಪುನವರ್ಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು. ಅಲ್ಲಿಂದ ಚಿಕಿತ್ಸೆ ಪಡೆದು ಬಂದ ಬಳಿಕ ಪತ್ನಿಯ ಮೇಲೆಯೇ ದಿವಾಕರ್ ಶಂಕೆ ಪಡುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಸಹ ನಡೆಯುತ್ತಿತ್ತು. ಆದರೆ, ಈಗ ಪತ್ನಿಯ ಮೇಲೆ ಚಾಕುವಿನಿಂದ ದಾಳಿ ಮಾಡಿ ಎಸ್ಕೇಪ್ ಆಗಿದ್ದ ದಿವಾಕರನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಬಾಣಸವಾಡಿ ಪೊಲೀಸರೇ ಆಸ್ಪತ್ರೆಯಲ್ಲಿ ನಿಖಿತಾರ ಆರೈಕೆಯನ್ನು ಮಾಡುತ್ತಿದ್ದಾರೆ. ಇಬ್ಬರು ಮಕ್ಕಳ ದೃಷ್ಟಿಯಿಂದ ಮಹಿಳಾ ಪೊಲೀಸ್ ಸಿಬ್ಬಂದಿ ನಿಖಿತಾರ ರಕ್ಷಣೆ ಮತ್ತು ಆರೈಕೆ ಮಾಡುತ್ತಿದ್ದಾರೆ. ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್)