5 ತಿಂಗಳ ಗರ್ಭಿಣಿ ಪತ್ನಿಗೆ ಜಾಡಿಸಿ ಒದ್ದ ಗಂಡ: ಚಲಿಸುವ ಬಸ್​ನಿಂದ ಕೆಳಗೆ ಬಿದ್ದು ದುರ್ಮರಣ

Pregnant Wife
Published on

ಚೆನ್ನೈ: ಗರ್ಭಿಣಿ ಅಂತಾನೂ ನೋಡದೆ ತಾಳಿ ಕಟ್ಟಿದ ಪತ್ನಿಗೆ ಜಾಡಿಸಿ ಒದ್ದ ಪರಿಣಾಮ ಚಲಿಸುತ್ತಿರುವ ಬಸ್​ನಿಂದ ಹೊರಗೆ ಬಿದ್ದು ಆಕೆ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ದಿಂಡಿಗಲ್​ ಜಿಲ್ಲೆಯಲ್ಲಿ ಕಳೆದ ಭಾನುವಾರ ನಡೆದಿದೆ.

ವಲರಮತಿ (19) ಮೃತ ದುರ್ದೈವಿ. 8 ತಿಂಗಳ ಹಿಂದಷ್ಟೇ ವೆಂಬರಪತಿ ಮೂಲದ 24 ವರ್ಷದ ಪಾಂಡಿಯನ್​ ಎಂಬಾತನನ್ನು ಮದುವೆಯಾಗಿದ್ದಳು. ಸಾಂಸಾರಿಕ ಜೀವನ ಚೆನ್ನಾಗಿಯೇ ಇತ್ತು. ಆದರೂ ಮಾಮೂಲಿ ಎಂಬಂತೆ ಗಂಡ-ಹೆಂಡತಿ ನಡುವೆ ಮನಸ್ತಾಪಗಳು ಸಾಮಾನ್ಯವಾಗಿತ್ತು. ಭಾನುವಾರ ಇಬ್ಬರು ದಿಂಡಿಗಲ್​ನಿಂದ ಪೊನ್ನಾಮರವತಿಗೆ ಸರ್ಕಾರಿ ಬಸ್​ನಲ್ಲಿ ತೆರಳುತ್ತಿದ್ದರು.

ಪಾನಮತ್ತನಾಗಿದ್ದ ಪಾಂಡಿಯನ್​, ಯಾವುದೋ ಕಾರಣಕ್ಕೆ 5 ತಿಂಗಳು ಗರ್ಭಿಣಿಯಾಗಿದ್ದ ವಲರಮತಿ ಜತೆ ಕ್ಯಾತೆ ತೆಗಿದಿದ್ದಾನೆ. ಇಬ್ಬರ ನಡುವೆ ನಡೆದ ವಾಗ್ವಾದ ತಾರಕಕ್ಕೇರಿ, ತಾಳ್ಮೆ ಕಳೆದುಕೊಂಡ ಪಾಂಡಿಯನ್​, ಕನವೈಪಟ್ಟಿ ಬಳಿ ತನ್ನ ಪತ್ನಿಗೆ ಜಾಡಿಸಿ ಒದ್ದಿದ್ದಾನೆ. ಇದರ ಪರಿಣಾಮ ಬಸ್​ನಿಂದ ಕೆಳಗೆ ಬಿದ್ದ ವಲರಪತಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದಾಳೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಲರಮತಿ ಮೃತದೇಹವನ್ನು ತಮ್ಮ ವಶಕ್ಕೆ ಪಡೆದುಕೊಂಡು, ದಿಂಡಿಗಲ್​ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಬಂಧಿತ ಪಾಂಡಿಯನ್​ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net