ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ 38 ವರ್ಷದ ಮಹಿಳೆಗೆ 54 ವರ್ಷ ಜೈಲು ಶಿಕ್ಷೆ! Court

Court
Published on

ಚೆನ್ನೈ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನದಲ್ಲಿರುವ ಮಹಿಳೆಗೆ ತಮಿಳುನಾಡಿನ ತಿರುಚಿರಾಪಳ್ಳಿ ನ್ಯಾಯಾಲಯ ( Court ) 54 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ, ಸಂತ್ರಸ್ತನಿಗೆ 6 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.

ಅಂದಹಾಗೆ, ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ 2021 ರಲ್ಲಿ ನಡೆದಿತ್ತು. ಆರೋಪಿ ಲಲಿತಾ, ತಿರುವರೂರು ಜಿಲ್ಲೆಯ ಎಲವಾಂಚೇರಿಯ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ತನ್ನ ಪತಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದ ಲಲಿತಾ, ಸ್ಥಳೀಯ ಹುಡುಗನ ಜೊತೆ ತುಂಬಾ ಹತ್ತಿರವಾಗಿದ್ದರು. ಈ ವಿಚಾರ ಗೊತ್ತಾದ ಕೂಡಲೇ ಇಬ್ಬರ ಸಂಬಂಧವನ್ನು ಮುರಿಯಲು, ಹುಡುಗನ ಕುಟುಂಬ ಆತನನ್ನು ಸಂಬಂಧಿಕರ ಮನೆಗೆ ಕಳುಹಿಸಿತು.

ಸಂಬಂಧಿಕರ ಮನೆಗೆ ಹೋದ ಹುಡುಗ ಅಲ್ಲಿಂದ ಕಾಣೆಯಾದಾಗ, ಸಂಬಂಧಿಕರು ದೂರು ದಾಖಲಿಸಿದರು. ಪೊಲೀಸ್​ ತನಿಖೆಯ ಸಮಯದಲ್ಲಿ ಇಬ್ಬರೂ ವೇಲಾಂಕಣಿಯಲ್ಲಿ ಪತ್ತೆಯಾಗಿದ್ದರು. ಅಪ್ರಾಪ್ತ ಬಾಲಕನನ್ನು ಅಪಹರಿಸಿದ್ದ ಆರೋಪಿ ಲಲಿತಾ, ಊಟಿಯ ಹೋಟೆಲ್ ಕೋಣೆಯಲ್ಲಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂಬುದು ತನಿಖೆಯ ವೇಳೆ ತಿಳಿದುಬಂದಿತು.

ಈ ಪ್ರಕರಣ ಸಂಬಂಧ ತಿರುಚಿರಾಪಳ್ಳಿಯ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ, ಪೋಕ್ಸೋ ಕಾಯ್ದೆಯ ಎರಡು ಸೆಕ್ಷನ್‌ಗಳ ಅಡಿಯಲ್ಲಿ ತಲಾ 20 ವರ್ಷ ಮತ್ತು ಅಪಹರಣ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 14 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net