ಇವು ನಿಮ್ಮ ಪಾಸ್​ವರ್ಡ್​ ಆಗಿದ್ರೆ ಈ ಕೂಡಲೇ ಚೇಂಜ್​ ಮಾಡಿಕೊಳ್ಳಿ ಇಲ್ಲದಿದ್ದರೆ ಸಂಕಷ್ಟ ಗ್ಯಾರಂಟಿ! Passwords

Passwords
Published on

ನವದೆಹಲಿ: ಈ ಡಿಜಿಟಲ್​ ಯುಗದಲ್ಲಿ ನಾವು-ನೀವೆಲ್ಲ ಅಕ್ಷರಶಃ ಪಾಸ್​ವರ್ಡ್ ( Passwords )​ ಜಾಲದಲ್ಲಿ ಸಿಲುಕಿದ್ದೇವೆ. ನಮ್ಮ ಗೌಪ್ಯತೆ ಕಾಪಾಡಿಕೊಳ್ಳಲು ಪಾಸ್​ವರ್ಡ್​ ಬೇಕು, ನಮ್ಮ ಹಣ ಉಳಿಸಿಕೊಳ್ಳಲು ಪಾಸ್​ವರ್ಡ್​ ಬೇಕು ಮತ್ತು ನಮ್ಮ ವೈಯಕ್ತಿಕ ಮಾಹಿತಿ ಲೀಕ್​ ಆಗದಂತೆ ತಡೆಯಲು ಪಾಸ್​ವರ್ಡ್​ ಅಗತ್ಯವಿದೆ. ಹೀಗೆ ಒಂದಲ್ಲ ಒಂದು ವಿಚಾರಕ್ಕೆ ಪಾಸ್​ವರ್ಡ್​ ಬೇಕಾಗಿರುವುದರಿಂದ ನಮ್ಮ ಬದುಕು ಪಾಸ್​ವರ್ಡ್​ ಜಾಲದಲ್ಲಿ ಸಿಲುಕಿದೆ ಎಂದು ಹೇಳಿದರೆ ತಪ್ಪಾಗಲಾರದು.

ಇಂದು ಪ್ರತಿಯೊಂದು ವಿಚಾರದಲ್ಲಿ ಪಾಸ್​ವರ್ಡ್​ ಅಗತ್ಯವಾಗಿರುವುದರಿಂದ ಜನರಿಗೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಂದು ಸವಾಲಾಗಿದೆ. ಅಲ್ಲದೆ, ಒಂದು ಅಥವಾ ಎರಡು ತಿಂಗಳಿಗೆ ಒಮ್ಮೆ ಪದೇಪದೆ ಪಾಸ್​ವರ್ಡ್​ ಚೇಂಜ್​ ಮಾಡಬೇಕಿರುವುದು ದೊಡ್ಡ ತಲೆನೋವು. ಹೀಗಾಗಿ ಬಹುತೇಕ ಮಂದಿ ಸುಲಭವಾಗಿ ನೆನಪಿನಲ್ಲಿ ಉಳಿಯುವಂತಹ ಪಾಸ್​ವರ್ಡ್​ಗಳನ್ನು ಬಳಕೆ ಮಾಡುತ್ತಾರೆ. ಕೆಲವರು ತಮ್ಮ ಹುಟ್ಟಿದ ದಿನವನ್ನು ಪಾಸ್​ವರ್ಡ್​ ಆಗಿ ಬಳಸಿದರೆ, ಇನ್ನು ಕೆಲವರು ತಮ್ಮ ಮೊಬೈಲ್​ ನಂಬರ್​ ಹಾಗೂ ಮಕ್ಕಳ ಹುಟ್ಟಿದ ದಿನ ಸೇರಿದಂತೆ ತುಂಬಾ ಸರಳವಾದ ಪಾಸ್​ವರ್ಡ್​ಗಳನ್ನು ಬಳಕೆ ಮಾಡುತ್ತಾರೆ. ಆದರೆ, ನಮ್ಮ ನೆನಪಿನಲ್ಲಿ ಉಳಿಯಲು ಸುಲಭವಾಗಿರಲಿ ಅನ್ನೋ ಕಾರಣಕ್ಕೆ ಸರಳ ಪಾಸ್​ವರ್ಡ್​ ಬಳಕೆ ಮಾಡುವುದು ಎಷ್ಟು ಸರಿ? ಈ ವಿಚಾರದಲ್ಲಿ ಒಂದು ಪ್ರಮುಖ ಎಚ್ಚರಿಕೆ ಕರೆ ಬಂದಿದೆ.

ತುಂಬಾ ಅಸಡ್ಡೆ

ಹ್ಯಾಕರ್‌ಗಳಿಗೆ ನಿಮ್ಮ ಪಾಸ್‌ವರ್ಡ್‌ಗಳು ಗೊತ್ತಾಗಿದೆ. ಹೌದು, ನೀವು ಕೇಳುತ್ತಿರುವುದು ನಿಜ. ನೀವು ನೆನಪಿಟ್ಟುಕೊಳ್ಳಲು ಸುಲಭವಾದ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದರೆ, ನಿಮ್ಮ ಮಾಹಿತಿ ಎಲ್ಲ ಸೈಬರ್ ಅಪರಾಧಿಗಳ ಕೈವಶವಾಗುತ್ತಿದೆ. ಸೈಬರ್​ ಸುರಕ್ಷತೆಯ ಬಗ್ಗೆ ಪದೇಪದೆ ಎಚ್ಚರಿಕೆ ನೀಡಿದ್ದರೂ, ಇತ್ತೀಚಿನ ಸಮೀಕ್ಷೆಯ ಪ್ರಕಾರ ಅನೇಕ ಇಂಟರ್ನೆಟ್ ಬಳಕೆದಾರರು ಪಾಸ್‌ವರ್ಡ್‌ಗಳ ಬಗ್ಗೆ ತುಂಬಾ ಅಸಡ್ಡೆ ಹೊಂದಿದ್ದಾರೆಂದು ಹೇಳಿದೆ. 2025ರಲ್ಲಿ, ಲಕ್ಷಾಂತರ ಮಂದಿ ದುರ್ಬಲ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಕಂಪಾರಿಟೆಕ್‌ನ ಹೊಸ ವರದಿಯ ಪ್ರಕಾರ, ವಿಶ್ವದ ಅತ್ಯಂತ ಸಾಮಾನ್ಯ ಅಥವಾ ದುರ್ಬಲ ಪಾಸ್‌ವರ್ಡ್ (ಪಾಸ್‌ವರ್ಡ್ಸ್ ಲೀಕ್) ಮತ್ತೊಮ್ಮೆ "123456" ಆಗಿದೆ. ಈ ವರ್ಷ ಡೇಟಾ ಅಥವಾ ದತ್ತಾಂಶ ಉಲ್ಲಂಘನೆಯಿಂದ ಲೀಕ್​ ಆದ ಸುಮಾರು 2 ಬಿಲಿಯನ್‌ಗಿಂತಲೂ ಹೆಚ್ಚು ಪಾಸ್‌ವರ್ಡ್‌ಗಳನ್ನು ಕಂಪಾರಿಟೆಕ್​ ಪೋರ್ಟಲ್ ವಿಶ್ಲೇಷಿಸಿದ್ದು, ಕೆಲವು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಅನೇಕ ಇಂಟರ್ನೆಟ್ ಬಳಕೆದಾರರು ಲಕ್ಷಾಂತರ ಖಾತೆಗಳಿಗೆ ಅಗ್ರ ಮೂರು ಪಾಸ್‌ವರ್ಡ್‌ಗಳಾದ 123456, 12345678, ಮತ್ತು 123456789 ಅನ್ನು ಬಳಸಿದ್ದಾರೆ. ಟಾಪ್ 10 ರ್ಯಾಂಕಿಂಗ್​ನಲ್ಲಿ, 'ಅಡ್ಮಿನ್, ಪಾಸ್‌ವರ್ಡ್ ಮತ್ತು 12345' ಹೆಚ್ಚು ಬಳಸಲ್ಪಟ್ಟಿವೆ ಎಂದು ಕಂಪಾರಿಟೆಕ್​ನ ವರದಿ ಹೇಳಿದೆ.

ಹೆಚ್ಚು ಬಳಸಿದ ಟಾಪ್ 10 ಪಾಸ್‌ವರ್ಡ್‌ಗಳು

* 123456

* 12345678

* 123456789

* admin

* 1234

* Aa123456

* 12345

* password

* 123

* 1234567890 ​

ಇವು ಸಾಮಾನ್ಯವಾಗಿ ಬಳಸುವ ಪದಗಳು

ವಾಸ್ತವವಾಗಿ, ಟಾಪ್ 1,000 ಪಾಸ್‌ವರ್ಡ್‌ಗಳಲ್ಲಿ ಸುಮಾರು ಕಾಲು ಭಾಗದಷ್ಟು ಪಾಸ್‌ವರ್ಡ್‌ಗಳು ಕೇವಲ ಸಂಖ್ಯೆಗಳನ್ನು ಮಾತ್ರ ಒಳಗೊಂಡಿವೆ. ಮೂರನೇ ಒಂದು ಭಾಗಕ್ಕಿಂತ ಹೆಚ್ಚು (ಶೇ. 38.6) '123' ಅನುಕ್ರಮವನ್ನು ಒಳಗೊಂಡಿವೆ. ಕೆಲವು ಬಳಕೆದಾರರು ಸ್ವಲ್ಪ ಕ್ರಿಯೇಟಿವಿಟಿಯನ್ನು ಬಳಸಿದ್ದಾರೆ. ಟಾಪ್ 1,000 ಪಾಸ್​ವರ್ಡ್​ಗಳಲ್ಲಿ ಸುಮಾರು 4 ಪ್ರತಿಶತದಷ್ಟು "ಪಾಸ್‌ವರ್ಡ್"ಗಳಲ್ಲಿ ಮಾತ್ರ ವ್ಯತ್ಯಾಸಗಳು ಕಾಣಿಸಿಕೊಂಡಿವೆ. ಆದರೆ, "ಅಡ್ಮಿನ್" ಶೇ. 2.7 ರಷ್ಟು ಕಾಣಿಸಿಕೊಂಡಿದೆ.

ಕಂಪಾರಿಟೆಕ್ ಪ್ರಕಾರ, "ಕ್ವೆರ್ಟಿ" ಮತ್ತು "ವೆಲ್ಕಮ್" ಸಹ ಪಾಸ್​ವರ್ಡ್​ ಆಗಿ ಕಾಣಿಸಿಕೊಂಡಿವೆ. ಇದಾದ ನಂತರ, "ಮೈನ್‌ಕ್ರಾಫ್ಟ್" ಎಂಬ ಪಾಸ್‌ವರ್ಡ್ ಹೆಚ್ಚು ಬಳಸಿದ 100ನೇ ಪಾಸ್‌ವರ್ಡ್ ಆಗಿದೆ. ಇದು ಸುಮಾರು 90,000 ಬಾರಿ ಕಾಣಿಸಿಕೊಂಡಿದೆ. ಇನ್ನು 'India@123' ಟಾಪ್ 100 ರಲ್ಲಿ 53 ನೇ ಸ್ಥಾನದಲ್ಲಿದೆ. ಹೆಚ್ಚಿನ ಜನರು ಈ ಪಾಸ್‌ವರ್ಡ್ ಅನ್ನು ಬಳಸುತ್ತಿದ್ದಾರೆ.

ಅಂದಹಾಗೆ, ಪಾಸ್‌ವರ್ಡ್ ಉದ್ದ ಕನಿಷ್ಠ 12 ಅಕ್ಷರಗಳಾಗಿರಬೇಕು ಎಂದು ಅನೇಕ ತಜ್ಞರು ಶಿಫಾರಸು ಮಾಡುತ್ತಾರೆ. ಪಾಸ್‌ವರ್ಡ್ ಉದ್ದವನ್ನು ಹೆಚ್ಚಿಸುವುದರಿಂದ ಕ್ರ್ಯಾಕಿಂಗ್ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ, ವರದಿಯ ಪ್ರಕಾರ, ಶೇ. 65.8 ರಷ್ಟು ಪಾಸ್‌ವರ್ಡ್‌ಗಳು 12 ಅಕ್ಷರಗಳಿಗಿಂತ ಕಡಿಮೆ ಇವೆ. ಇದು ಸೈಬರ್ ಸುರಕ್ಷತೆಯ ವಿಷಯದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net