

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಫೋಟೋದಲ್ಲಿ ಕುರ್ಚಿಯ ಮೇಲೆ ಕುಳಿತಿರುವ ಪುಟ್ಟ ಬಾಲಕಿಯನ್ನು ಕಾಣಬಹುದು. ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿರುವ ಆ ಬಾಲಕಿ ಒಂದು ಕಾಲದಲ್ಲಿ ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ಕನ್ನಡದಲ್ಲಿ ನಟ ಸುದೀಪ್, ಗಣೇಶ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಹಾಗೂ ಪ್ರಜ್ವಲ್ ದೇವರಾಜ್ ಜತೆ ನಟಿಸಿದ್ದಾರೆ. ಅಲ್ಲದೆ, ಈ ನಟಿಯ ಬದುಕಲ್ಲಿ ಒಂದು ಕಹಿ ಘಟನೆ ಕೂಡ ನಡೆದಿದೆ. ಸದ್ಯ ಮದುವೆ ಆಗಿರುವ ಈ ನಟಿ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.
ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಸೌತ್ ಬ್ಯೂಟಿ ಭಾವನಾ. ಒಂದು ಕಾಲದಲ್ಲಿ ಕನ್ನಡದಲ್ಲಿ ಸ್ಟಾರ್ ನಟಿಯಾಗಿ ಮೆರೆದರು.
ಅಂದಹಾಗೆ, ಭಾವನಾರ ಪೂರ್ತಿ ಹೆಸರು ಭಾವನಾ ಮೇನನ್. 1986ರ ಜೂನ್ 6 ರಂದು ಕೇರಳದ ತ್ರಿಸ್ಸೂರ್ನಲ್ಲಿ ಜನಿಸಿದರು. ಅವರ ತಂದೆ ಜಿ. ಬಾಲಚಂದ್ರನ್ ಸಹಾಯಕ ಸಿನೆಮಾಟೋಗ್ರಾಫರ್ ಆಗಿದ್ದರು. ಅವರ ತಾಯಿಯ ಹೆಸರು ಪುಷ್ಪಾ. ಅವರಿಗೊಬ್ಬ ಸಹೋದರ ಇದಾರೆ. ಅವರ ಹೆಸರು ಜಯದೇವ್. ಹೋಲಿ ಫ್ಯಾಮಿಲಿ ಕಾನ್ವೆಂಟ್ ಗರ್ಲ್ಸ್ ಹೈ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಬಳಿಕ, ಅವರು ಸಿನಿಮಾ ರಂಗದ ಕಡೆ ಒಲವು ತೋರಿದರು. ಬಾಲ್ಯದಲ್ಲೇ ಅಮಲಾ ಅಭಿನಯ ಶೈಲಿಯನ್ನು ಅನುಕರಿಸುತ್ತಾ ಕೈಗೆ ಗಾಯವಾದ ಘಟನೆಯೂ ಅವರ ಜೀವನದಲ್ಲಿ ನೆನಪಾಗಿ ಉಳಿದಿದೆ. ಸಂಗೀತ ಆಲಿಸುವುದು, ಸಿನಿಮಾ ನೋಡುವುದು ಮತ್ತು ಪುಸ್ತಕಗಳನ್ನು ಓದುವುದು ಅವರ ಹವ್ಯಾಸಗಳು. ಅವರ ಮೆಚ್ಚಿನ ನಟರು ರಜನಿಕಾಂತ್, ಮಮ್ಮೂಟ್ಟಿ, ಮೋಹನ್‌ಲಾಲ್ ಮತ್ತು ಕಮಲ್ ಹಾಸನ್ ಆಗಿದ್ದಾರೆ.
ಭಾವನಾ ಅವರು ಮಲಯಾಳಂ ಸಿನಿಮಾ 'ನಮ್ಮಲ್' (2002) ಮೂಲಕ ಅಭಿನಯ ಜೀವನಕ್ಕೆ ಪ್ರವೇಶಿಸಿದರು. ಆ ಸಿನಿಮಾದಲ್ಲಿ ಪರಿಮಲಂ ಎಂಬ ಪಾತ್ರದಲ್ಲಿ ನಟಿಸಿ ಗಮನ ಸೆಳೆದರು. 'ದೈವನಮಾತಿಲ್' (2005) ಸಿನಿಮಾದಲ್ಲಿ ಸಮೀರಾ ಪಾತ್ರಕ್ಕಾಗಿ ಕೇರಳ ಸ್ಟೇಟ್ ಫಿಲ್ಮ್ ಅವಾರ್ಡ್‌ಗೆ ಆಯ್ಕೆಯಾದರು. ತಮಿಳು ('ಚಿತ್ತಿಲಂ ಪೇಸುತಡಿ', 2006), ತೆಲುಗು ('ಒಂತಾರಿ', 2008) ಮತ್ತು ಕನ್ನಡ ('ಜಾಕಿ', 2009) ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ನಟಿ ಎಂಬ ಪಟ್ಟ ಪಡೆದರು. ಕೇರಳ ಸ್ಟ್ರೈಕರ್ಸ್ ತಂಡದ ಬ್ರ್ಯಾಂಡ್ ಅಂಬಾಸಡರ್ ಆಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸಿದ್ದಾರೆ. ಅವರ ಅಭಿನಯ ಶೈಲಿ ಸಹಜ ಮತ್ತು ಆಕರ್ಷಕವಾಗಿದ್ದು, ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಅವರಿಗೆ ವಿಶಿಷ್ಟ ಸ್ಥಾನವಿದೆ.
ಭಾವನಾ ಅವರು ಕನ್ನಡದಲ್ಲಿ ಸುದೀಪ್ ಜತೆ ಬಚ್ಚನ್ ಮತ್ತು ವಿಷ್ಣುವರ್ಧನ, ಪುನೀತ್ ರಾಜ್ಕುಮಾರ್ ಜತೆ ಜಾಕಿ, ಮೈತ್ರಿ ಮತ್ತು ಯಾರೇ ಕೂಗಾಡಲಿ, ಶಿವರಾಜ್ಕುಮಾರ್ ಜತೆ ಟಗರು, ಪ್ರಜ್ವಲ್ ದೇವರಾಜ್ ಜತೆ ಇನ್ಸ್ಪೆಕ್ಟರ್ ವಿಕ್ರಮ್ ಹಾಗೂ ನಟ ಗಣೇಶ್ ಜತೆ ರೋಮಿಯೋ ಮತ್ತು 99 ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಭಾವನಾ ಅವರು 2018ರ ಜನವರಿ 22ರಂದು ಕನ್ನಡ ನಿರ್ಮಾಪಕ ನವೀನ್‌ರನ್ನು ತ್ರಿಸ್ಸೂರ್ನ ತಿರುವಂಬಾಡಿ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿವಾಹ ಮಾಡಿಕೊಂಡರು. 2017ರಲ್ಲಿ ನಡೆದ ಕಿಡ್ನ್ಯಾಪ್ ಮತ್ತು ಲೈಂಗಿಕ ಹಲ್ಲೆ ಘಟನೆಯನ್ನು 2022ರಲ್ಲಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದರು. ಇದು ಮಲಯಾಳಂ ಸಿನಿಮಾ ರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. (ಏಜೆನ್ಸೀಸ್)