ನಿಮಗೆ ತಾಕತ್ತಿದ್ದರೆ ನಮ್ಮನ್ನು ಮುಟ್ಟಿ ನೋಡಿ: ಸಿಎಂ ಸ್ಟಾಲಿನ್​ಗೆ ಅಣ್ಣಾಮಲೈ ಸವಾಲು

K Annamalai
Published on

ಚೆನ್ನೈ: ನಿಮಗೆ ತಾಕತ್ತಿದ್ದರೆ ನಮ್ಮನ್ನು ಮುಟ್ಟಿ ನೋಡಿ ಎನ್ನುವ ಮೂಲಕ ಬಿಜೆಪಿ ವಿರುದ್ಧ ಕಠೋರ ಮಾತುಗಳನ್ನಾಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್​ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಖಡಕ್​ ತಿರುಗೇಟು ನೀಡಿದ್ದಾರೆ.

ಇಂದು ಶಿವಗಂಗಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ, ಸಹೋದರಿ ಕನ್ನಿಮೋಳಿ ಅವರನ್ನು ಬಂಧಿಸಿದ್ದಾಗಲೂ ಸ್ಟಾಲಿನ್​ ಅವರ ಮುಖದಲ್ಲಿ ಇಷ್ಟೊಂದು ಕೋಪ ಕಂಡಿರಲಿಲ್ಲ. ಇಡಿಯಿಂದ ಬಂಧನವಾಗಿರುವ ಸಚಿವ ಸೆಂಥಿಲ್​ ಬಾಲಾಜಿ ಡಿಎಂಕೆ ಪಕ್ಷದ ಖಜಾನೆ ಎಂದು ಜನರು ಹೇಳುತ್ತಿದ್ದಾರೆ. ತನ್ನ ಬೆದರಿಕೆ ಹೇಳಿಕೆಗಳ ಮೂಲಕ ಸ್ಟಾಲಿನ್​ ಅವರು ಎಲ್ಲ ಮಿತಿಗಳನ್ನು ಮೀರಿದ್ದಾರೆ.

ನಿಮ್ಮ ಬೆದರಿಕೆಗಳಿಗೆ ನಾವು ಭಯಬೀತರಾಗುತ್ತೇವೆ ಅಂತ ನೀವು ಅಂದುಕೊಂಡಿದ್ದೀರಾ? ನಿಮಗೆ ತಾಕತ್ತಿದ್ದರೆ ನಮ್ಮಲ್ಲಿ ಯಾರಾದರೂ ಒಬ್ಬರನ್ನು ಮುಟ್ಟುವ ಪ್ರಯತ್ನ ಮಾಡಿ. ನೀವು ಏನು ಕೊಡುತ್ತೀರೋ ಅದನ್ನು ಮರಳಿ ಪಡೆಯುತ್ತೀರಿ ಎಂದು ಅಣ್ಣಾಮಲೈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ತಮ್ಮ ಸಂಪುಟದ ಸಚಿವ ಸೆಂಥಿಲ್​ ಬಾಲಾಜಿ ಅವರನ್ನು ಇಡಿ ಅಧಿಕಾರಿಗಳು ಮೊನ್ನೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ. ಇದರಿಂದ ಸ್ಟಾಲಿನ್​ ಬಿಜೆಪಿ ವಿರುದ್ಧ ಆಕ್ರೋಶಭರಿತರಾಗಿದ್ದಾರೆ.

ಬೆದರಿಕೆಯಲ್ಲ ಎಚ್ಚರಿಕೆ

ಡಿಎಂಕೆಯಿಂದ ಪ್ರತಿಯಾಗಿ ಬರುವ ಯಾವುದೇ ರೀತಿಯ ಪ್ರತೀಕಾರವನ್ನು ಬಿಜೆಪಿಗೆ ನಿಭಾಯಿಸಲು ತುಂಬಾ ಕಷ್ಟವಾಗಬಹುದು ಎಂದು ಸ್ಟಾಲಿನ್ ಟ್ವೀಟ್​ ಮೂಲಕ ಎಚ್ಚರಿಕೆ ನೀಡಿದ್ದರು. ಸೇಡು ತೀರಿಸಿಕೊಳ್ಳಲು ಕೇಂದ್ರದ ಏಜೆನ್ಸಿಗಳನ್ನು ನಿಯೋಜಿಸುವ ಬದಲು ಮುಖಾಮುಖಿ ಬರುವಂತೆ ಸವಾಲು ಹಾಕಿದ್ದರು. ಇದು ಬೆದರಿಕೆಯಲ್ಲ ಬದಲಿಗೆ ಇದು ಎಚ್ಚರಿಕೆ ಎಂದಿದ್ದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ದೇಶವು ಅಘೋಷಿತ ತುರ್ತು ಪರಿಸ್ಥಿತಿಯನ್ನು ಅನುಭವಿಸುತ್ತಿದೆ ಎಂದು ಸ್ಟಾಲಿನ್​ ಕಿಡಿಕಾರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net