ಜಗತ್ತಿನ ಅತಿ ಎತ್ತರದ ಜನರಿರುವ ದೇಶ ಯಾವುದು ಗೊತ್ತಾ? ಅಮರಿಕವನ್ನೂ ಹಿಂದಿಕ್ಕಿದೆ ಈ ರಾಷ್ಟ್ರ!

Tallest people
Published on

ನವದೆಹಲಿ: ಕಳೆದ ಕೆಲವು ದಶಕಗಳವರೆಗೆ ಅಮೆರಿಕ ವಿಶ್ವದಲ್ಲೇ ಅತಿ ಹೆಚ್ಚು ಎತ್ತರದ ಜನರನ್ನು ಹೊಂದಿರುವ ದೇಶ ಎಂದು ಹೇಳಲಾಗುತ್ತಿತ್ತು. ಆದರೆ, ಕಾಲಾನಂತರದಲ್ಲಿ ಇದು ಬದಲಾಗಿದೆ. ಇದೀಗ ನೆದರ್ಲೆಂಡ್​ ವಿಶ್ವದಲ್ಲೇ ಅತಿ ಹೆಚ್ಚು ಎತ್ತರದ ಜನರನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿನ ಜನರ ಸರಾಸರಿ ಎತ್ತರ 184 ಸೆಂ.ಮೀ. ಅಂದರೆ ಸುಮಾರು 6.03 ಅಡಿ.

18ನೇ ಶತಮಾನದವರೆಗೆ ನೆದರ್ಲೆಂಡ್​ ಮತ್ತು ಯುರೋಪಿನ ಹೆಚ್ಚಿನ ಜನರ ಸರಾಸರಿ ಎತ್ತರವು 165 ಸೆಂಟಿಮೀಟರ್​ಗಳಷ್ಟಿತ್ತು. ಆದರೆ ಕಳೆದ 200 ವರ್ಷಗಳಲ್ಲಿ ಡಚ್ ಜನರ ಎತ್ತರವು ಸರಾಸರಿ 15 ಸೆಂಟಿಮೀಟರ್​ಗಳಷ್ಟು ಹೆಚ್ಚಾಗಿದೆ.

ಮಾಧ್ಯಮ ವರದಿಯ ಪ್ರಕಾರ ನೆದರ್ಲೆಂಡ್​ ಮಹಿಳೆಯರ ಸರಾಸರಿ ಎತ್ತರ 168.5 ಸೆಂಟಿಮೀಟರ್‌ಗಳು (5.52 ಅಡಿ). ಪುರುಷರ ಸರಾಸರಿ ಎತ್ತರವು 184 ಸೆಂಟಿ ಮೀಟರ್​ಗಳು. ಕೆಲವು ದಶಕಗಳ ಹಿಂದೆ ಅಮೆರಿಕನ್ನರನ್ನು ವಿಶ್ವದ ಅತಿ ಎತ್ತರದವರೆಂದು ಪರಿಗಣಿಸಲಾಗಿತ್ತು. ಆದರೆ ಇದೀಗ ಅಮೆರಿಕವನ್ನು ನೆದರ್ಲೆಂಡ್ ಹಿಂದಿಕ್ಕಿದೆ. ಅಮೆರಿಕನ್ ಪುರುಷರ ಸರಾಸರಿ ಎತ್ತರ 177.2 ಸೆಂಟಿಮೀಟರ್ (5.8 ಅಡಿ). ಆದಾಗ್ಯೂ, ಮಹಿಳೆಯರ ಸರಾಸರಿ ಎತ್ತರವು 163.25 ಸೆಂಟಿಮೀಟರ್‌ಗಳನ್ನು (5.3 ಅಡಿ) ತಲುಪಿದೆ.

ಲಂಡನ್‌ನ ರಾಯಲ್ ಸೊಸೈಟಿಯ ಪ್ರಕಾರ, 18ನೇ ಶತಮಾನದವರೆಗೆ, ನೆದರ್ಲೆಂಡ್​ ಜನರು ಎತ್ತರದ ವಿಚಾರದಲ್ಲಿ ಪ್ರಪಂಚದಲ್ಲೇ ಅತ್ಯಂತ ಕಡಿಮೆ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಕಳೆದ 200 ವರ್ಷಗಳಲ್ಲಿ ಅನಿರೀಕ್ಷಿತ ಬೆಳವಣಿಗೆ ಸಂಭವಿಸಿದ್ದು, ನೆದರ್ಲೆಂಡ್​ ಅಮೆರಿಕನ್ನರನ್ನು ಹಿಂದಿಕ್ಕಿ ವಿಶ್ವದ ಅತಿ ಎತ್ತರದ ಜನರನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.

ಡಚ್ ಜನರ ಎತ್ತರವನ್ನು ಅಧ್ಯಯನ ಮಾಡಿದ ಕೆನಡಾದ ಲೆಥ್‌ಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಲೂಯಿಸ್ ಬ್ಯಾರೆಟ್, ಡಚ್ ಜನರ ಎತ್ತರವನ್ನು ಹೆಚ್ಚಿಸುವಲ್ಲಿ ಜೆನೆಟಿಕ್ಸ್ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ. ದಚ್​ ಜನರು ಇಷ್ಟು ಎತ್ತರವಾಗಿರಲು ಅವರು ಸೇವಿಸುವ ಆಹಾರ ಮತ್ತು ಪಾನೀಯಗಳ ಗುಣಮಟ್ಟ ಪ್ರಮುಖವಾಗಿದೆ ಎಂದಿದ್ದಾರೆ. ಅಲ್ಲಿನ ಜೀವನಶೈಲಿಯಿಂದಾಗಿ ಕಳೆದ ಕೆಲವು ದಶಕಗಳಲ್ಲಿ ನೆದರ್ಲೆಂಡ್​ ಜೀವನಮಟ್ಟ ಬದಲಾಗಿದೆ ಮತ್ತು ಸಾಂಕ್ರಾಮಿಕ ರೋಗಗಳಿಂದ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಬ್ಯಾರೆಟ್ ಹೇಳಿದ್ದಾರೆ.

ಪ್ರೊಫೆಸರ್ ಲೂಯಿಸ್ ಬ್ಯಾರೆಟ್ ಪ್ರಕಾರ ಡಚ್ ಜನರ ಎತ್ತರವನ್ನು ಹೆಚ್ಚಿಸಲು ಹಾಲು, ಮೊಸರು ಮತ್ತು ಚೀಸ್​ನಂತಹ ಡೈರಿ ಉತ್ಪನ್ನಗಳು ಬಹಳಷ್ಟು ಕೊಡುಗೆ ನೀಡಿವೆ. ಕಳೆದ ಕೆಲವು ವರ್ಷಗಳಲ್ಲಿ ನೆದರ್ಲೆಂಡ್​ನಲ್ಲಿ ಹಲವಾರು ಡೈರಿ ಫಾರ್ಮ್​ಗಳನ್ನು ತೆರೆಯಲಾಗಿದೆ. ಡೈರಿ ಉತ್ಪನ್ನಗಳ ಮೇಲೆ ಅಲ್ಲಿನ ಜನರ ಅವಲಂಬನೆ ಹೆಚ್ಚಾಗಿದೆ. ಈ ಕಾರಣದಿಂದಾಗಿ ಮೂಳೆಗಳನ್ನು ಬಲಪಡಿಸಲು ಮತ್ತು ಎತ್ತರವನ್ನು ಹೆಚ್ಚಿಸಲು ಕ್ಯಾಲ್ಸಿಯಂ ತುಂಬಾ ಮುಖ್ಯವಾಗಿದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net